ಆಧುನಿಕತೆಯ ಭರಾಟೆಯಲ್ಲಿ ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆಗಳ ಉಳಿವು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕಕಾನಿಪಸ) ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ ಹೇಳಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಳೇಹಳ್ಳಿಯ ಮಾತಂಗ ಜಾನಪದ ಸಾಂಸ್ಕೃತಿಕ ಸಂಘದಿಂದ ಸೋಮವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ದೂರವಾಗಿ ನೆಮ್ಮದಿ ದೊರೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಸಂಗೀತ ಗಾಯನ ಸೇರಿ ಜಾನಪದ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಗ್ರಾಮೀಣ ಕಲೆ ಪರಿಚಯಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಮಹೇಶ್ ಮಾತನಾಡಿ, ಆಧುನಿಕತೆ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮಾರು ಹೋಗುತ್ತಿರುವುದರಿಂದ ಗ್ರಾಮೀಣ ಕಲೆ, ಸಂಸ್ಕೃತಿ ತೆರೆ ಮರೆಗೆ ಸರಿಯುತ್ತಿದೆ. ಮೌಲ್ಯಯುತವಾದ ಮೂಲ ಜಾನಪದ ಕಲೆಯನ್ನು ಉಳಿಸಿ-ಬೆಳೆಸವುದು ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯವ ಕೆಲಸವಾಗಬೇಕಿದೆ ಎಂದರು.
ಮಾತಂಗ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಮಾಳೇಹಳ್ಳಿ ತಿಪ್ಪೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಟಿ. ಗಂಗಾಧರ, ಶಿಕ್ಷಕ ವಿರೂಪಾಕ್ಷಪ್ಪ ಮಾತನಾಡಿದರು.
ಹಿರಿಯ ಕಲಾವಿದ ಬೋರಪ್ಪ, ಸಂಗೀತ ನಿರ್ದೇಶಕ ಸಿದ್ದಯ್ಯನಕೋಟೆ ಎಂ.ನುಂಕೇಶ್, ಕಲಾವಿದರಾದ ಸಕಲಾಪುರದಹಟ್ಟಿ ಯಲ್ಲಪ್ಪ, ಕುರಿಹಟ್ಟಿ ರಾಜು, ನಲಗೇತನಹಟ್ಟಿ ಮುತ್ತುರಾಜ್, ಮಲ್ಲೂರಹಳ್ಳಿ ತಿಪ್ಪೇಶ್, ಹಾರಕಬಾವಿ ತಿಪ್ಪೇಸ್ವಾಮಿ, ಬಣವಿಕಲ್ಲು ಮಂಜುನಾಥ, ಕೀಬೋರ್ಡ್ ವಾದಕ ಇಮಡಾಪುರ ಸ್ರೀಧರ, ಪ್ಯಾಡ್ ವಾದಕ ಮಹಾಂತೇಶ್, ತಬಲಾ ವಾದಕ ದುರುಗಪ್ಪ ಹಾಗೂ ಶಿಕ್ಷಕರಿದ್ದರು.
ಕಲಾವಿದ ನಲಗೇತನಹಟ್ಟಿ ಮುತ್ತುರಾಜ್ ಅವರು ಸುಗಮ ಸಂಗೀತ ಗಾಯನ, ಕಲಾವಿದರಾದ ಈರಣ್ಣ-ಶ್ರೀನಿವಾಸ್ ಅವರು ಉರುಮೆ, ಪೂಜಾರಹಳ್ಳಿ ಮಂಜು, ಕರಿಬಸಪ್ಪ ಅವರು ಹಲಗೆ ಕಲೆ ಪ್ರದರ್ಶಿಸಿದರು.