ಪತ್ರಕರ್ತ, ರಾಜಕಾರಣಿಗಳಿಗೂ ದಂಡ

ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುತ್ತಿರುವು ಪೊಲೀಸರು
ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುತ್ತಿರುವು ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಹೆಲ್ಮೆಟ್ ತಪಾಸಣೆ ಕಾರ್ಯಾಚರಣೆ ಬಿಗಿ
  • ಜೂ.1ರಿಂದ 3,948 ಪ್ರಕರಣಗಳು
  • 19.74 ಲಕ್ಷ ರೂ. ದಂಡ ವಸೂಲಿ
ಬಳ್ಳಾರಿ : ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಹಿತದೃಷ್ಠಿಯಿಂದ ಜಿಲ್ಲಾ ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ದಿನದಿಂದ ದಿನಕ್ಕೆ ತಪಾಸಣೆ ಭಾರಿ ಬಿಗಿಗೊಳ್ಳುತ್ತಿದ್ದಂತೆ, ಹೆಲ್ಮೆಟ್ ಧರಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಜೂ.1ರಿಂದ ಜಿಲ್ಲೆಯ ನಗರ ಹಾಗೂ ಕಂಪ್ಲಿ, ಸಿರಗುಪ್ಪ, ಸಂಡೂರು, ಕುರುಗೋಡು ಸೇರಿದಂತೆ ತಾಲೂಕುಗಳಲ್ಲಿ ಈ ನಿಯಮ ಜಾರಿಗೆ ಬಂದಿದ್ದು, ಈಗಾಗಲೇ ಶೇ.85ಕ್ಕೂ ಅಧಿಕ ಮಂದಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ.
ಹೆಲ್ಮೆಟ್ ಧರಿಸದವರಿಗೆ ಮೊದಲ ದಿನ ದಂಡ ವಿಧಿಸದೆ ಎಚ್ಚರಿಕೆ ನೀಡಿ ಹೆಲ್ಮೆಟ್ ಖರೀದಿಸುವಂತೆ ಹೇಳಿ ಕಳುಹಿಸಲಾಗುತ್ತಿತ್ತು. ಜೂ.2ರಿಂದ ದಂಡ ವಿಧಿಸಲು ಆರಂಭಿಸಲಾಯಿತು. ಜನಸಾಮಾನ್ಯರು ಅಲ್ಲದೇ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕೆಲ ಪೊಲೀಸರು, ಪತ್ರಕರ್ತರು, ವಕೀಲರು ಹಾಗೂ ಕೆಲ ರಾಜಕಾರಣಿಗಳಿಗೂ ಪೊಲೀಸರು ದಂಡ ವಿಧಿಸಲಾಗಿದೆ. ಆ ಕಾರ್ಯವನ್ನು ಕಟ್ಟುನಿಟ್ಟಾಗಿ ಮುಂದುವರಿಸುವುದಾಗಿ ಪೊಲೀಸರು ತಿಳಿಸುತ್ತಿದ್ದಾರೆ.
ಹೆಲ್ಮೆಟ್ ಧರಿಸದೆ ಬಂದರೆ ಯಾರೇ ಆಗಿದ್ದರೂ, ಮುಲಾಜಿಲ್ಲದೆ, ಯಾರ ಒತ್ತಡಕ್ಕೂ ಮಣಿಯದೆ ಕ್ರಮ ವಹಿಸುವಂತೆ ಜಿಲ್ಲಾ ಎಸ್ಪಿ ಕಟ್ಟು ನಿಟ್ಟಾಗಿ ಸೂಚಿಸದ ಪರಿಣಾಮ, ಸಂಚಾರ ಠಾಣೆಯ ಸಿಪಿಐ ರುದ್ರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೆಲ್ಮೆಟ್ ಕಡ್ಡಾಯ ಮಾಡಿ ಅನುಷ್ಠಾನಗೊಳಿಸಲು ರಾಜಕಾರಣಿಗಳು, ಮಾಧ್ಯಮ, ಸಂಘ, ಸಂಸ್ಥೆಗಳು, ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಗುತ್ತಿದೆ. ಸಾರ್ವಜನಿಕರೇ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪಾಲಿಕೆ ಸದಸ್ಯರಾದ ಎಂ.ಪ್ರಭಂಜನಕುಮಾರ್, ಗೋವಿಂದರಾಜುಲು ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
ಕೆಲವರು ಅರೆ ಹೆಲ್ಮೆಟ್ ಧರಿಸಿ, ಬೈಕ್ ಹಿಂದಗಡೆ ಹಾಕಿಕೊಂಡು, ಮುಂಭಾಗದಲ್ಲಿ ಇಟ್ಟುಕೊಂಡು ದ್ವಿಚಕ್ರ ವಾಹನ ಚಲಾಯಿಸುವುದು ಕಂಡು ಬರುತ್ತಿದೆ. ಅಂಥವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ. ಜಿಲ್ಲಾ ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಿಂದ ಹೆಲ್ಮೆಟ್ ಮಾರಾಟಗಾರರಿಗೆ ಸುಗ್ಗಿಕಾಲ ಬಂದೊದಗಿದೆ. ಅಂಗಡಿಗಳಲ್ಲಿ, ಬೀದಿ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಜೋರಾಗಿದೆ.
ತಗ್ಗಿದೆ ತಲೆ ಪೆಟ್ಟು ಪ್ರಕರಣ : ಜಿಲ್ಲೆಯಲ್ಲಿ ಜೂ.1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ನಿಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಪಘಾತಗಳಲ್ಲಿ ತಲೆಗೆ ತೀವ್ರ ಪೆಟ್ಟಾಗುವ ಪ್ರಕರಣಗಳು ಗಣನೀಯವಾಗಿ ತಗ್ಗಿವೆ. ಪ್ರಸ್ತುತ ಅಪಘಾತಕ್ಕೀಡಾದ ಸವಾರರಿಗೆ ಕೇವಲ ಕೈ-ಕಾಲುಗಳಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಂಚಾರ ಠಾಣೆ ಪೊಲೀಸರೊಬ್ಬರು ತಿಳಿಸಿದರು.
ಆದರೆ, ಕಳೆದ ಹದಿನೈದು ದಿನಗಳಲ್ಲಿ ಹೆಲ್ಮೆಟ್ ಧರಿಸದ ಇಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ. ಗವಿಯಪ್ಪ ವೃತ್ತದಲ್ಲಿ ಲಾರಿ ಚಕ್ರಕ್ಕೆ ತಲೆ ಸಿಲುಕಿ ತಾಲೂಕಿನ ಜೋಳದರಾಶಿ ಗ್ರಾಮದ ವೀರೇಶ್(28) ಹಾಗೂ ಅವಂಬಾವಿ ಬಳಿ ನಿಯಂತ್ರಣ ತಪ್ಪಿ ಬಿದ್ದು ನಗರದ ನಿವಾಸಿ ನಾಗೇಂದ್ರ(32)ಎಂಬುವವರು ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಜೂ.1ರಿಂದ ಜೂ.15ರವರೆಗೆ ಜಿಲ್ಲಾದ್ಯಂತ ಒಟ್ಟು 3,948 ಪ್ರಕರಣಗಳನ್ನು ದಾಖಲಿಸಿ, 19.74 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜೀವ ರಕ್ಷಣೆಯ ಈ ಜಾಗೃತಿ ಹೆಚ್ಚಿಸಲು, ಜೂನ್ 16ರಿಂದ ಹೆಲ್ಮೆಟ್ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ಜಾರಿಯಾಗಲಿಲ್ಲ : ಈ ಹಿಂದೆ ಜಿಲ್ಲಾ ಎಸ್ಪಿಯಾಗಿದ್ದ ಪಿ.ಶೋಭಾರಾಣಿ ಅವರು ಹೆಲ್ಮೆಟ್ ಕಡ್ಡಾಯಗೊಳಿಸುವುದಾಗಿ ಪತ್ರಿಕಾ ಪ್ರಕಟಣೆ, ಬೈಕ್ ಜಾಥಾ ಮೂಲಕ ಅರಿವು ಮೂಡಿಸಿದ್ದರು. ಆದರೆ, ಜಿಲ್ಲೆಯಿಂದ ವರ್ಗಾವಣೆಯಾಗುವವರೆಗೂ ಕಡ್ಡಾಯ ಹೆಲ್ಮೆಟ್ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲೇ ಜಾರಿಗೊಳಿಸಿದರು. ಮೇ ತಿಂಗಳಾದ್ಯಂತ ಹೆಲ್ಮೆಟ್ ಬಗ್ಗೆ ಜಾಗೃತಿ ಹಾಗೂ ಜಾಥಾ ನಡೆಸಿ ಹೆಲ್ಮೆಟ್ ಅರಿವು ಮೂಡಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಾತ್ರರಾಗಿದ್ದರು.
"

ಕೋಟ್... ಸವಾರರು ದಂಡ ವಿಧಿಸುವ ಭಯದಿಂದ ಹೆಲ್ಮೆಟ್ ಧರಿಸಬಾರದು. ತಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು ಎಂಬ ಮನೋಭಾವನೆ ಬಂದರೆ ಪೊಲೀಸರಿಗೆ ಹೊರೆ ತಪ್ಪಲಿದೆ.- ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net