ಕಡತಗಳ ವರ್ಗ ಕಕ್ಷಿದಾರರ ಪರದಾಟ

ನ್ಯಾಯಾಲಯದ ನಿಯೋಜಿತ ಕಟ್ಟಡದ ನೋಟ.
ನ್ಯಾಯಾಲಯದ ನಿಯೋಜಿತ ಕಟ್ಟಡದ ನೋಟ.
Published on
ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಗಾದೆಯಂತೆ ಪಟ್ಟಣದಲ್ಲಿ ಸಿವಿಲ್-ಜೆಎಂಎಫ್‌ಸಿ (ಸಂಚಾರಿ) ನ್ಯಾಯಾಲಯ ಆರಂಭಕ್ಕೆ ಬಾಲಗ್ರಹ ಪೀಡೆ ಒಕ್ಕರಿಸಿದೆ.
ನ್ಯಾಯಾಲಯ ಆರಂಭಕ್ಕೆ ಹೈಕೋರ್ಟ್ ಹಿತಾಸಕ್ತಿ ತೋರಿದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಕೇವಲ ಕಡತ ಯಜ್ಞದ ಹೊಗೆ ಏಳುತ್ತಿದೆಯೇ ವಿನಹ ಆರಂಭದ ಲಕ್ಷಣಗಳು ಕಾಣುತ್ತಿಲ್ಲ. ಇತ್ತ ವಿಜಯನಗರ ಜಿಲ್ಲೆಯ ಕಡತಗಳು ಬಳ್ಳಾರಿ ಜಿಲ್ಲೆಗೆ ಹಸ್ತಾಂತರಗೊಳ್ಳುತ್ತಿದ್ದಂತೆ ಕಕ್ಷಿದಾರರಿಗೆ ಮತ್ತೆ ಹೊಸದಾಗಿ ನ್ಯಾಯವಾದಿಗಳನ್ನು ನೇಮಿಸುವ ತಲೆನೋವು ಶುರುವಾಗಿದೆ.
2021ರ ಅಕ್ಟೋಬರ್‌ನಲ್ಲಿ ವಿಜಯನಗರ ಜಿಲ್ಲೆ ರಚನೆಯಾಗಿ ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಾಗಲೇ ಕಕ್ಷಿದಾರರಿಗೆ ವ್ಯಾಜ್ಯ ಬಗೆಹರಿಯುವ ಮತ್ತು ನ್ಯಾಯ ದೊರಕುವ ಕಾಲ ವಿಳಂಬವಾಯಿತು. 2024ರ ಮೇ 30ರಂದು ಪಟ್ಟಣದಲ್ಲಿ ಸಂಚಾರಿ ನ್ಯಾಯಾಲಯ ಆರಂಭಕ್ಕೆ ಉಚ್ಚ ನ್ಯಾಯಾಲಯದಿಂದ ಹಸಿರು ನಿಶಾನೆ ದೊರೆಯಿತು.
ಕಂಪ್ಲಿ ತಾಲೂಕು ವಕೀಲರ ಬಳಗದ ಹರಸಾಹಸದಿಂದಾಗಿ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ಬಾಡಿಗೆ ಆಧಾರದಡಿ, ಪಟ್ಟಣದ 20ನೇ ವಾರ್ಡ್ ಮಾರುತಿನಗರದ ಉದ್ಯಾನದಲ್ಲಿರುವ ಪುರಸಭೆ ಆಧೀನದ ಕಟ್ಟಡವನ್ನು 2025ರ ನ.22ರಂದು ನ್ಯಾಯಾಲಯಕ್ಕೆ ನೀಡಲು ಪುರಸಭೆ ಒಪ್ಪಿತು.
ಕಟ್ಟಡವನ್ನು ನ್ಯಾಯಾಲಯದ ಕಾರ್ಯಕಲಾಪಗಳಿಗೆ ತಕ್ಕಂತೆ ದುರಸ್ತಿ ಮತ್ತು ನವೀಕರಿಸಲು ಸಮೀಕ್ಷೆ ಮಾಡುವಂತೆ ನ್ಯಾಯಾಲಯವು ಪಿಡಬ್ಲುೃಡಿ ಇಲಾಖೆಯನ್ನು ಕೋರಿತ್ತು. ಅದರಂತೆ ಒಟ್ಟು 15 ಲಕ್ಷ ರೂ.ಗಳ ನವೀಕರಣದ ಅಂದಾಜು ಪಟ್ಟಿಯನ್ನು ಇಲಾಖೆ ನೀಡಿತು. ಅಂದಾಜು ಪಟ್ಟಿಯಂತೆ ನವೀಕರಿಸಲು ನ್ಯಾಯಾಲಯವು ಸೂಚಿಸಿ ತಾದರೂ 2025ರ ಡಿ.17ರಂದು ಪಿಡಬ್ಲುೃಡಿ ಅಧಿಕಾರಿಗಳು ನಮ್ಮಲ್ಲಿ ಅನುದಾನ ಲಭ್ಯವಿಲ್ಲ ಎಂದು ಪತ್ರ ಬರೆದು ಜಾರಿಕೊಂಡರು.
ಕಟ್ಟಡವು ಪುರಸಭೆಗೆ ಸೇರಿದ್ದರಿಂದ ಅವರೇ ನವೀಕರಿಸಲಿ ಎಂದು ಕೈತೊಳೆದುಕೊಂಡರು. ಕೂಡಲೇ ನ್ಯಾಯಾಲಯವು ಡಿ.18ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು, ಕಟ್ಟಡ ನವೀಕರಿಸಿಕೊಡುವಂತೆ ಕೋರಿತು. ಇದಕ್ಕೆ ಜಿಲ್ಲಾಧಿಕಾರಿ ಡಿ.26ರಂದು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಷರಾ ಬರೆದರು.
ನ್ಯಾಯಾಲಯಕ್ಕೆ ಕಟ್ಟಡ ದೊರಕಿಸಿಕೊಳ್ಳಲು ತಾಲೂಕಿನ ವಕೀಲರು ಬರೋಬ್ಬರಿ 19 ತಿಂಗಳು ಹೆಣಗಾಡಿದರು. ಈಗ ಕಟ್ಟಡ ದೊರೆತ ಮೇಲೂ ನವೀಕರಣಕ್ಕಾಗಿ ಸರ್ಕಸ್ ಮಾಡುವಂತಾಗಿದೆ. ಡಿಸಿ ಆದ್ಯತೆಯ ಷರಾ ಬರೆದು ತಿಂಗಳಾಗುತ್ತ ಬಂದರೂ ನವೀಕರಣ ಕಾರ್ಯ ಆರಂಭವಾಗಿಲ್ಲ. ಇತ್ತ ಹೊಸಪೇಟೆ ನ್ಯಾಯಾಲಯವು ಕಂಪ್ಲಿ ತಾಲೂಕಿಗೆ ಸಂಬಂಧಿಸಿದ ಅಂದಾಜು 900ಕ್ಕೂ ಹೆಚ್ಚು ಕಡತಗಳನ್ನು ಬಳ್ಳಾರಿ ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತಿದೆ. ಈ ಕಡತಗಳಿಗೆ ಮತ್ತೆ ಹೊಸ ಸಂಖ್ಯೆ ನೀಡಿ ಕಕ್ಷಿದಾರರಿಗೆ ನೋಟಿಸ್ ನೀಡಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ವಾದ-ವಿವಾದ ಮತ್ತು ತೀರ್ಪುಗಳು ಮುಂದೂಡಲ್ಪಡುತ್ತವೆ. ಮೇಲಾಗಿ ಬಳ್ಳಾರಿಯಲ್ಲಿ ಹೊಸ ವಕೀಲರನ್ನು ಗೊತ್ತು ಮಾಡುವ ಫಜೀತಿ ಕಕ್ಷಿದಾರರಿಗೆ ಎದುರಾಗಿದೆ.
ಈಗಾಗಲೇ ಮಾಡಿಕೊಂಡ ಖರ್ಚು-ವೆಚ್ಚಗಳನ್ನು ಮರೆತು ಪುನಃ ಹೊಸದಾಗಿ ಹಣ ವ್ಯಯಿಸಲು ಕಕ್ಷಿದಾರರು ಸಿದ್ಧರಾಗಬೇಕಿದೆ.
ಕಂಪ್ಲಿಯಲ್ಲಿ ನ್ಯಾಯಾಲಯ ಆರಂಭ ಗೊಂಡರೆ ಮತ್ತೆ ಕಡತಗಳು ಬಳ್ಳಾರಿಯಿಂದ ಇಲ್ಲಿಗೆ ವರ್ಗಾವಣೆಗೊಳ್ಳುತ್ತವೆ. ಆಗ ಪುನಃ ಹೊಸ ಸಂಖ್ಯೆ ನೀಡುವ ಪ್ರಕ್ರಿಯೆಗೆ ಸಮಯ ವ್ಯರ್ಥವಾಗುತ್ತದೆ. ಒಟ್ಟಿನಲ್ಲಿ ಕಂಪ್ಲಿ ತಾಲೂಕನ್ನು ಹೊಸಪೇಟೆಯಿಂದ ಬಿಡಿಸಿ ಬಳ್ಳಾರಿಗೆ ಸೇರಿಸಿದ ಕ್ರಮಕ್ಕೆ ಕಕ್ಷಿದಾರರು ಹಿಡಿಶಾಪ ಹಾಕುತ್ತಿದ್ದಾರೆ.
ಕಂಪ್ಲಿಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಲು ಅನುಮತಿ ದೊರೆತು ಎರಡು ವರ್ಷಗಳಾದರೂ ನ್ಯಾಯಾಲಯ ಸ್ಥಾಪನೆಯಾಗದಿರುವುದು ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ತಾಲೂಕಿನ ಜನತೆಗೆ ಆಗುತ್ತಿರುವ ಅನ್ಯಾಯವಾಗಿದೆ. ಇದಕ್ಕೆ ನಾವೆಲ್ಲ ಒಗ್ಗಟ್ಟಾಗಿ ದೊಡ್ಡ ಪ್ರಮಾಣದ ಹೋರಾಟ ನಡೆಸಿ ಬಳ್ಳಾರಿ ಜಿಲ್ಲೆಯಿಂದ ಹೊರ ಬರಬೇಕಿದೆ.
ಅಯ್ಯೋದಿ ಹರೀಶ ಕಾರ್ಯದರ್ಶಿ, ವಕೀಲರ ಬಳಗ, ಕಂಪ್ಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net