ಗಡಿ ಜಿಲ್ಲೆಯಲ್ಲಿ ಕಾರ್ಮಿಕರ ವಲಸೆ ಅತಂಕ

ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ನರೇಗಾದಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು.
ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ನರೇಗಾದಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ
ಬಳ್ಳಾರಿ : ಜಿಲ್ಲೆಯಲ್ಲಿ ಮನರೇಗಾದಡಿ ಹೊಸ ಕಾಮಗಾರಿ ಸೃಷ್ಟಿಯಾಗಿಲ್ಲ. ಬದಲಾಗಿ ಬಾಕಿಯಿರುವ ಹಳೆ ಕಾಮಗಾರಿಗಳೇ ಮುಂದುವರಿದಿದೆ. ಮನರೇಗಾ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಗೊಂದಲದಲ್ಲಿ ಹೊಸ ಕಾಮಗಾರಿಗೆ ಅನುದಾನ, ಅನುಮೋದನೆ ಇಲ್ಲದೆ ಗಡಿಕಾರ್ಮಿಕರು ವಲಸೆ ಹೋಗುವ ಅತಂಕ ಎದುರಾಗಿದೆ.
ತುಂಗಭದ್ರ ಜಲಾಶಯದ ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರಣದಿಂದ ಎರಡನೇ ಬೆಳೆಗೆ ನೀರು ಹರಿಸದ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಸದ್ಯ, ಗ್ರಾಮೀಣ ಕಾರ್ಮಿಕರ ಕೈಹಿಡಿಬೇಕಿದ್ದೇ ಮನರೇಗಾ ಯೋಜನೆ. ಇಂತಹ ಸಮಯದಲ್ಲಿ ಉದ್ಯೋಗ ನೀಡಿ ವಲಸೆ ತಪ್ಪಿಸಬೇಕು. ಜಿಲ್ಲೆಯಲ್ಲಿ 1.87 ಲಕ್ಷ ಉದ್ಯೋಗ ಚೀಟಿಗಳಿವೆ. ಈ ಪೈಕಿ 1.08 ಲಕ್ಷ ಕುಟುಂಬಗಳಿವೆ. 5.13 ಲಕ್ಷ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ 1.37 ಲಕ್ಷ ಸಕ್ರಿಯ ಉದ್ಯೋಗ ಚೀಟಿಗಳಿವೆ. ಈ ಪೈಕಿ ಮಹಿಳೆಯರೇ ಹೆಚ್ಚಿದ್ದಾರೆ. ಸದ್ಯ ದುಡಿಯುವ ಕೈಗಳ ಸ್ಥಿತಿ ಅತಂತ್ರವಾಗುವ ಕಾಲ ಬಂದೊದಗಿದೆ. ಜಿಲ್ಲೆಗೆ ಗಡಿ ಹೊಂದಿಕೊಂಡಿರುವ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಂತ ಮಹಾನಗರಗಳಿಗೆ ಕೂಲಿ ಅರಸಿ ವಲಸೆ ಹೋಗುವ ಮಾತುಗಳು ಕೇಳಿ ಬರುತ್ತಿವೆ.
ವಿಕಸಿತ್ ಭಾರತ ಗ್ರಾಮೀಣ ರೋಜ್‌ಗಾರ್ ಆ್ಯಂಡ್ ಅಜೀವಿಕ ಮಿಷನ್ (ವಿಬಿ ಜಿ ರಾಮ್ ಜಿ) ಸಂಬಂಧ ಕೇಂದ್ರ ಸರ್ಕಾರ ಇನ್ನೂ ನಿಯಮಗಳನ್ನೇ ರೂಪಿಸಿಲ್ಲ. ಅಲ್ಲದೆ, ಹೆಸರಿನ ಜತೆ ಕೆಲ ಬದಲಾವಣೆ ಮಾಡಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿ ಮನರೇಗಾವನ್ನು ಮುಂದುವರಿಸುವುದಾಗಿ ಹೇಳುತ್ತಿದೆ. ಹೊಸ ಕಾಮಗಾರಿ ಸೃಜನೆಗೆ ಪೋರ್ಟಲ್ ತೆರೆದುಕೊಳ್ಳುತ್ತಿಲ್ಲ ಎಂಬುದು ಗೊತ್ತಾಗಿದೆ. ಈ ಎಲ್ಲ ಗೊಂದಲದಲ್ಲಿ ಗ್ರಾಮೀಣ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ.
2026- 27ನೇ ಸಾಲಿನಲ್ಲಿ ಏಪ್ರಿಲ್ ಮಟ್ಟಿಗೆ 12 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಆದರೆ, 2025ರ ಏಪ್ರಿಲ್ ದಿಂದ ಡಿಸೆಂಬರ್‌ವರೆಗೆ 42 ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಿತ್ತು. 37.72 ಲಕ್ಷ ಮಾನವ ಸೃಜನೆಯಾಗುವ ಮೂಲಕ ಶೇ. 90ರಷ್ಟು ಗುರಿ ಸಾಧಿಸಿ ರಾಜ್ಯದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು.
ಜಿಲ್ಲೆಯಲ್ಲಿ 101 ಗ್ರಾಮ ಪಂಚಾಯಿತಿಗಳಿದ್ದು, ಉದ್ಯೋಗ ಚೀಟಿ ಹೊಂದಿದ ಕುಟುಂಬವೊಂದಕ್ಕೆ ದಿನಕ್ಕೆ 379 ರೂ. ಕೂಲಿ ಸಿಗುತ್ತದೆ. ಎಂಟು ಗಂಟೆಯ ಅವಧಿಯಲ್ಲಿ ಒಬ್ಬ ಕಾರ್ಮಿಕ (ಎರಡು ಅಡಿ ಅಳ, ಮೂರು ಅಡಿ ಅಗಲ ಹಾಗೂ ಹತ್ತು ಅಡಿ ಉದ್ದ ) ಅಗೆದರೆ ಮಾತ್ರ ದಿನದ ಒಟ್ಟು ಮೊತ್ತ ದೊರೆಯಲಿದೆ. ಇಲ್ಲದಿದ್ದರೆ ಕೂಲಿ ಹಣದಲ್ಲಿ ಕಡಿವಾಣಗೊಳ್ಳಲಿದೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು. ಜಲ ಸಂರಕ್ಷಣೆಗಾಗಿ ಕೆರೆ, ಕಾಲುವೆಗಳ ಪುನಶ್ಚೇತನ, ಗೋಕಟ್ಟೆ, ಕಲ್ಯಾಣಿ ಅಭಿವೃದ್ಧಿ, ಅಂಗನವಾಡಿ ಕಟ್ಟಡ ನಿರ್ಮಾಣ, ಶಾಲಾ ಆವರಣ, ಕೌಂಪೌಂಡ್, ಆಟದ ಮೈದಾನ ನಿರ್ಮಾಣ, ಗ್ರಾಮೀಣ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ರೈತರ ಹೊಲಗಳಿಗೆ ಕಾಲುದಾರಿ ನಿರ್ಮಾಣದ ಕಾಮಗಾರಿಗಳು ಸೇರಿದ್ದವು. ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ ನಿರ್ಮಾಣ, ಶೌಚಾಲಯ, ಜಾನುವಾರು ಶೆಡ್‌ನಂತಹ ವೈಯಕ್ತಿಕ ಕಾಮಗಾರಿಗಳನ್ನು ಕಲ್ಪಿಸಲಾಗುತ್ತಿತ್ತು.
ಬಾಕ್ಸ್ : ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಕಾರ್ಮಿಕರಿಗೆ ಕೊಡಬೇಕಾದ ಬಾಕಿ ಕೂಲಿ ಉಳಿದಿದೆ. ಇದರ ಜತೆಗೆ ಕಾಮಗಾರಿಗೆ ಬಳಸಿದ ಸಾಮಗ್ರಿಗಳಿಗೆ ನೀಡಬೇಕಾದ ಬಾಕಿ 27 ಕೋಟಿ ರೂ. ಬಾಕಿಯಿದೆ. ಇದಲ್ಲದೆ, ಸದ್ಯ ಹಳೆ ಕಾಮಗಾರಿಗಳೇ ನರೇಗಾ ಕೆಲಸ ಮುಂದುವರಿದಿದೆ. ಆದರೆ, ಸದ್ಯ ಉದ್ಯೋಗದಲ್ಲಿ ಪಾರದರ್ಶಕತೆ ಹಾಗೂ ನಕಲಿ ಹಾಜರಾತಿ ತಡೆಗಟ್ಟಲು ಹೊಸದಾಗಿ ತಂದಿರುವ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್(ಎನ್‌ಎಂಎಂಎಸ್) ಆ್ಯಪ್ ಮೂಲಕ ಕಾರ್ಮಿಕನ ಮುಖ ಗುರುತಿಸುವಿಕೆ (ಫೇಸ್ ಅಥೆಂಟಿಕೇಶನ್) ಕಡ್ಡಾಯಗೊಳಿಸಿದೆ. ಆದ್ದರಿಂದ, ಆರಂಭದಲ್ಲಿ ಕಾರ್ಮಿಕರು ಉದ್ಯೋಗ ಚೀಟಿ ವೇಳೆ ಕೆವೈಸಿ ಆಪ್‌ಡೇಟ್‌ನಲ್ಲಿ ನೀಡಿದ ಮುಖಚಿತ್ರ ಸದ್ಯದ ಮುಖಚಿತ್ರಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತಾಂತ್ರಿಕ ಸಮಸ್ಯೆ ತಂದೊಡ್ಡಿದೆ.
ಕೋಟ್... ಸದ್ಯ ಜಿಲ್ಲೆಯಲ್ಲಿ ನರೇಗಾದಡಿ ನೈಸರ್ಗಿಕ ಆಧಾರಿತ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದ್ದು, ರಾಜ್ಯದಲ್ಲೇ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕೆಲವೊಂದು ತಾಂತ್ರಿಕ ಆಧಾರಿತ ಸಣ್ಣಪುಟ್ಟ ದೋಷಗಳು ಸರಿಪಡಿಸಿಕೊಂಡು ಗುರಿ ಸಾಧಿಸಲಾಗುವುದು.
- ಮಹಮ್ಮದ್ ಹ್ಯಾರಿಸ್ ಸುಮೈರ್, ಸಿಇಒ, ಜಿಪಂ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net