ಅರಣ್ಯ ಗುತ್ತಿಗೆ ರದ್ದು ಭೀತಿ

ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ಸ ಲಿಮಿಟೆಡ್ ( ಸ್ಮಯೋರ್) ಕಂಪನಿಯ ಹೊರನೋಟ.
ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ಸ ಲಿಮಿಟೆಡ್ ( ಸ್ಮಯೋರ್) ಕಂಪನಿಯ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ
  • ಅತಂತ್ರ

* ಜಿಲ್ಲೆಯ ಸ್ಮಯೋರ್ ಗಣಿ ಕಂಪನಿ

* ವಿಸ್ತರಣೆಗೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ವಜಾ

ಬಳ್ಳಾರಿ : ಗಣಿ ಗುತ್ತಿಗೆಯ ಅರಣ್ಯ ಪರವಾನಗಿ (ಎಫ್‌ಸಿ) ವಿಸ್ತರಣೆಗಾಗಿ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪ್ರಶ್ನಿಸಿ ಜಿಲ್ಲೆಯ ‘ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ಸ ಲಿಮಿಟೆಡ್ ( ಸ್ಮಯೋರ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಇದರ ಪರಿಣಾಮ ಈ ಬಿಕ್ಕಟ್ಟು ಕೇವಲ ಕಂಪನಿಗೆ ಸೀಮಿತವಾಗದೆ, ಅದನ್ನು ನಂಬಿ ಬದುಕುತ್ತಿರುವ ಸುಮಾರು ಹನ್ನೊಂದು ಸಾವಿರ ಸ್ಥಳೀಯ, ಕನ್ನಡಿಗ ಕುಟುಂಬಗಳ ಭವಿಷ್ಯ ಅತಂತ್ರವಾಗಿದೆ. ಕಾನೂನು ಹೋರಾಟದಲ್ಲಿ ಕಂಪನಿಗೆ ಹಿನ್ನಡೆಯಾಗಿರುವುದು ಮತ್ತು ಗುತ್ತಿಗೆ ನವೀಕರಣ ಪ್ರಕ್ರಿಯೆ ಸ್ಥಗಿತಗೊಂಡರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ.
ಏನಿದು ಬಿಕ್ಕಟ್ಟು? : ಸಂಡೂರಿನ ಸ್ವಾಮಿಮಲೈ ಮತ್ತು ರಾಮನಮಲೈ ಅರಣ್ಯ ವಲಯಗಳಲ್ಲಿ ಘೋರ್ಪಡೆ ರಾಜಮನೆತನಕ್ಕೆ ಸೇರಿದ ‘ಸ್ಮಯೋರ್’ ಕಂಪನಿ 3,992.33 ಎಕರೆ ಹಾಗೂ 352.32 ಎಕರೆ ವಿಸ್ತೀರ್ಣದ ಎರಡು ಗಣಿ ಗುತ್ತಿಗೆಗಳನ್ನು ಹೊಂದಿದೆ. 1904ರಿಂದಲೂ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪ್ರಸ್ತುತ ಗಣಿ ಗುತ್ತಿಗೆ ಅವಧಿ 2033ರ ವರೆಗೆ ಇದ್ದರೂ, ಅರಣ್ಯಭೂಮಿ ಬಳಕೆಯ ಗುತ್ತಿಗೆ ಅವಧಿ 2026ರ ಡಿಸೆಂಬರ್ 5ಕ್ಕೆ ಮುಕ್ತಾಯಗೊಳ್ಳುತ್ತಿದೆ.
ನಿಯಮಾನುಸಾರ ಗಣಿಗಾರಿಕೆ ಮುಂದುವರಿಸಲು ಅರಣ್ಯ ಪರವಾನಗಿ ವಿಸ್ತರಣೆ ಅನಿವಾರ್ಯವಾಗಿದೆ. ಕಂಪನಿ ಈಗ 131.25 ಕೋಟಿ ರೂ. ಪರಿಹಾರಾತ್ಮಕ ಅರಣ್ಯೀಕರಣ ವೆಚ್ಚ, ಗಣಿಗೆ ಬಳಸಿಕೊಂಡ ಅರಣ್ಯ ಭೂಮಿಗೆ ಪ್ರತಿಯಾಗಿ 1,766.55 ಎಕರೆ ಭೂಮಿ ನೀಡಬೇಕು. ಇದೆಲ್ಲದರ ಒಟ್ಟು ಮೌಲ್ಯ 300 ರಿಂದ 400 ಕೋಟಿ ರೂ. ದಾಟಲಿದೆ. ಉಳಿದಿರುವ ಕೇವಲ 7 ವರ್ಷಗಳ ಅವಧಿಗಾಗಿ ಬೃಹತ್ ಮೊತ್ತವನ್ನು ಪಾವತಿಸುವುದು ಕಂಪನಿಗೆ ಆರ್ಥಿಕವಾಗಿ ಹೊರೆಯಾಗಲಿದೆ.
ಕಾರ್ಮಿಕರ ಆತಂಕ: ಕಾನೂನು ಹೋರಾಟದಲ್ಲಿ ಕಂಪನಿಗೆ ಹಿನ್ನಡೆಯಾಗಿರುವುದು ಮತ್ತು ಗುತ್ತಿಗೆ ನವೀಕರಣ ಪ್ರಕ್ರಿಯೆ ಸ್ಥಗಿತಗೊಂಡರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ. ಸಂಡೂರಿನ ಉಳಿದೆಲ್ಲ ಗಣಿಗಳಲ್ಲಿ ಉತ್ತರ ಭಾರತದ ಕಾರ್ಮಿಕರೇ ತುಂಬಿದ್ದರೂ, ಸ್ಮಯೋರ್ ಮಾತ್ರ ತನ್ನ ಕಂಪನಿಯಲ್ಲಿ ಸ್ಥಳೀಯ, ಕನ್ನಡಿಗರಿಗೆ ಮಾತ್ರವೇ ಉದ್ಯೋಗ ನೀಡುತ್ತಾ ಬಂದಿದೆ. ಪ್ರಸ್ತುತ 2,600 ಖಾಯಂ ನೌಕರರು ಹಾಗೂಅರೆಕಾಲಿಕ, ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 8 ರಿಂದ 11 ಸಾವಿರ ಕುಟುಂಬಗಳು ಇಲ್ಲಿ ಕೆಲಸ ಮಾಡುತ್ತಿವೆ.
ಇದಲ್ಲದೇ, ಕಂಪನಿಯು ಅತ್ಯಂತ ವ್ಯವಸ್ಥಿತ ಗಣಿಕಾರಿಕೆ ನಡೆಸುತ್ತಿದ್ದು, ಕೇಂದ್ರ ಗಣಿ ಸಚಿವಾಲಯ ನೀಡುವ ಸೆವೆನ್ ಸ್ಟಾರ್ ರೇಟಿಂಗ್ 2023- 24 ಸಾಲಿನ ಪ್ರಶಸ್ತಿಗೂ ಭಾಜವಾಗಿತ್ತು. ಮಾಜಿ ಸಚಿವ ಎಂ.ವೈ ಘೋರ್ಪಡೆ ಅವರ ಮೊಮ್ಮಗ ಬೆಹರ್ಜಿ ಅಜಿತ್ ಘೋರ್ಪಡೆ ಅವರ ನೇತೃತ್ವದ ಕಂಪನಿಯು ಈಗ ಮತ್ತೊಂದು ಹಂತದ ನ್ಯಾಯಾಂಗ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ತೀರ್ಪು ಮತ್ತು ಅರಣ್ಯ ಇಲಾಖೆಯೊಂದಿಗೆ ನಡೆಯುವ ಸಂವಹನಗಳು ಈ ಭಾಗದ ಸಾವಿರಾರು ಕುಟುಂಬಗಳ ಜೀವನೋಪಾಯವನ್ನು ನಿರ್ಧರಿಸಲಿವೆ.

ಕೋಟ್.. ಸ್ಮಯೋರ್ ಕಂಪನಿಯ ಅರಣ್ಯ ಗುತ್ತಿಗೆ 2026 ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಂಪನಿಯ ನೌಕರರ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರಗೊಳ್ಳಲಿದೆ.
- ದ್ವಿತೀಯ, ಉಪ ನಿರ್ದೇಶಕಿ, ಗಣಿ ಇಲಾಖೆ, ಬಳ್ಳಾರಿ.

ಕೋಟ್... ಅರಣ್ಯ ಗುತ್ತಿಗೆ ಸಂಬಂಧ ಕಾನೂನು ಸಲಹೆಗಾರರ ಜತೆ ಚರ್ಚಿಸಿ, ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಲಾಗುವುದು.
- ಹೆಸರು ಹೇಳಲಿಚ್ವಿಸದ ಅಧಿಕಾರಿ, ಸ್ಮಯೋರ್ ಕಂಪನಿ, ಸಂಡೂರು.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net