ಭತ್ತ ಮಾರಿದ್ದ ರೈತರಿಗೆ ಪಂಗನಾಮ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಗಂಗಾವತಿ: ಬಿಳಿ ಚೀಟಿ ಮೇಲೆ ಬಿಲ್ ತೆಗೆದುಕೊಂಡು ಭತ್ತ ಮಾರಿದ್ದ ರೈತರಿಗೆ ಖರೀದಿದಾರರು ಪಂಗನಾಮ ಹಾಕಿದ್ದು, ಕೋಟ್ಯಂತರ ರೂ. ಹಣಕ್ಕಾಗಿ ರೈತರು ಪೊಲೀಸರ ಮೊರೆ ಹೋಗಿದ್ದಾರೆ.
ನಗರದ ಸಿಬಿಎಸ್ ಗಂಜ್‌ನಲ್ಲಿ ವೀರೇಶ ಮತ್ತು ಗಿರಿಜಾ ಎಂಬುವರು ಸಂಜಯ್ ಮತ್ತು ರಾಹುಲ್ ಸಿಂಡಿಕೇಟ್ ಹೆಸರಿನಲ್ಲಿ ಭತ್ತ ಖರೀದಿ ಅಂಗಡಿ ತೆರೆದಿದ್ದು, ಗಂಗಾವತಿ ಸೇರಿ ಗ್ರಾಮೀಣ ಭಾಗದ ರೈತರಿಂದ ಅಂದಾಜು 3.5 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಭತ್ತ ಖರೀದಿಸಿದ್ದರು.
ಹಣ ಕೊಡದೆ ಕಳೆದ ತಿಂಗಳಿಂದ ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಖರೀದಿದಾರರು ಕೆಲದಿನಗಳಿಂದ ನಾಪತ್ತೆಯಾಗಿದ್ದರು. ಹಣಕ್ಕಾಗಿ ವಿನಾಯಕ ನಗರದಲ್ಲಿರುವ ಮಾಲೀಕರ ಮನೆ ಮುಂದೆ ರೈತರು ವಾರದ ಹಿಂದೆ ಪ್ರತಿಭಟನೆ ಮಾಡಿದ್ದರು.
ರೈತ ಮುಖಂಡರ ಸಮ್ಮುಖದಲ್ಲಿ ಹಣ ಕೊಡುವ ಬಗ್ಗೆ ತಿಳಿಸಿದ್ದಲ್ಲದೆ ಕಾಲಾವಕಾಶ ಕೇಳಿದ್ದರು. ಅವಧಿ ಮುಗಿದರೂ ಹಣ ನೀಡದಿದ್ದರಿಂದ ರೈತರು ಪೊಲೀಸರ ಮೊರೆ ಹೋಗಿದ್ದು, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮುಂದೆ ರೈತರು ಅಳಲು ತೊಡಿಕೊಂಡರು. ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಮಾತನಾಡಿ, ಮಾಲೀಕರೊಂದಿಗೆ ಕರೆಮಾಡಿ ಮಾತನಾಡಿದ್ದು, ತಾಳ್ಮೆಯಿಂದ ಇದ್ದರೆ ರೈತರಿಗೆ ಹಣ ದೊರೆಯಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net