ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತದ ಕೃಷಿ ಬಿಕ್ಕಟ್ಟು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ, ಪ್ರೊ. ದಸ್ತಗೀರಸಾಬ್ ದಿನ್ನಿ,ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚೂಸಾಬ್, ಪ್ರೊ.ಗಂಟೆಪ್ಪ ಶೆಟ್ಟಿ, ಅತಿಥಿ ಉಪನ್ಯಾಸಕರಾದ ಓಬಣ್ಣ, ಜಯಶೀಲ,ಅರ್ಜುನ್ ಇದ್ದರು.
ಬಳ್ಳಾರಿ : ಉತ್ತಮ ಬೀಜ, ಗೊಬ್ಬರ, ಸಕಾಲಕ್ಕೆ ನೀರು, ಧಾನ್ಯಕ್ಕೆ ಸಿಗದ ಬೆಲೆ, ವಾಣಿಜ್ಯೀಕರಣ ನೀತಿಗಳಿಂದಾಗಿ ಈ ದೇಶಕ್ಕೆ ಅನ್ನ ನೀಡುವ ರೈತ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಭಾರತದ ಕೃಷಿ ಬಿಕ್ಕಟ್ಟು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್ ಕಾರ್ಖಾನೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಿ ಕೃಷಿ ಭೂಮಿ ಬಳಸಿಕೊಂಡು, ಭೂಮಿ ಕಳೆದುಕೊಂಡವರಿಗೆ ಉದ್ಯೋಗದ ಆಮಿಷೆ ಒಡ್ಡಿ ಆಹಾರದ ಸಮಸ್ಯೆಗೆ ದೇಶವನ್ನು ಒಳಪಡುತ್ತಿಸುತ್ತಿರುವುದು ಕಳವಳಕಾರಿಯಾದ ಸಂಗತಿ. ಅವೈಜ್ಞಾನಿಕ ರಾಸಾಯನಿಕ ಔಷಧ, ಪರಿಸರ ನಾಶದಿಂದಾಗಿ ವಿಭಿನ್ನ ಬಗೆಯ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಯುವ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಮಾತನಾಡಿ, ಕಾಲಮಾನಕ್ಕೆ ಅನುಗುಣವಾಗಿ ರೈತರು ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ರಾಸಾಯನಿಕ ವಸ್ತುಗಳನ್ನು ಕಡಿಮೆ ಬಳಸಿ ವಿಷಮುಕ್ತ ಆಹಾರ ಪದಾರ್ಥಗಳನ್ನು ಬೆಳೆದು ಭಾರತ ದೇಶದ ಪ್ರಗತಿಗೆ ಕೈಜೋಡಿಸಬೇಕಾದ ಅಗತ್ಯವಿದೆ. ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾದ ಜರೂರಿದೆ ಎಂದರು.
ಕನ್ನಡ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಮಾತನಾಡಿ, ಹೊಸ ತಲೆಮಾರಿನವರು ಸರ್ಕಾರಿ ಹುದ್ದೆ ನೆಚ್ಚಿಕೊಳ್ಳದೆ ತಾವು ಪಡೆದುಕೊಂಡ ಜ್ಞಾನ ಕೃಷಿಗೆ ಬಳಸಿಕೊಳ್ಳಬೇಕು. ಆ ಮೂಲಕ ಭಾರತದ ಕೃಷಿ ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರ ಹುಡುಕಬೇಕು ಎಂದರು.