ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶದಿಂದ ಹದಿನಾರು ವರ್ಷಗಳ ಹಿಂದೆ ಕೆಐಡಿಬಿ ಮೂಲಕ ವಶಪಡಿಸಿಕೊಂಡು ಮಿತ್ತಲ್, ಬ್ರಾಹ್ಮಿಣಿ ಹಾಗೂ ಎನ್‌ಎಂಡಿಸಿ ಕಂಪನಿಗಳಿಗೆ ಭೂಮಿ ಹಂಚಿಕೆ ಮಾಡಲಾಗಿತ್ತು. ಹಲವು ವರ್ಷಗಳಾದರೂ ಯಾವುದೇ ಕಂಪನಿಗಳು ಉದ್ಯಮ ಆರಂಭಿಸದ ಹಿನ್ನೆಲೆಯಲ್ಲಿ ರೈತರ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಮಿತ್ತಲ್ ಕಂಪನಿಯೂ ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶ ಕೈಬಿಟ್ಟು ಆಂಧ್ರದಲ್ಲಿ ಹೂಡಿಕೆ ಮಾಡಲು ಹೊರಟಿದೆ. ಆದರೆ, ಈ ಮಿತ್ತಲ್ ಕಂಪನಿ ಬಿಟ್ಟಿರುವ ಎರಡೂವರೆ ಸಾವಿರ ಎಕರೆ ಭೂಮಿಯನ್ನು ಇದೀಗ ಜಿಂದಾಲ್ ಕಂಪನಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವ ಆರೋಪ ಕೇಳಿಬಂದಿದೆ. ಆದ್ದರಿಂದ, ಮಿತ್ತಲ್ ಕಂಪನಿ ವಾಪಸ್ ನೀಡಿರುವ ಭೂಮಿಯನ್ನು ಮೊದಲು ಡಿನೋಟಿಫಿಕೇಶನ್ ಮಾಡಬೇಕು. ನಂತರ ರೈತರ ಅನುಮತಿ ಪಡೆದು, ಹೆಚ್ಚುವರಿ ಪರಿಹಾರ ನೀಡಿದ ಬಳಿಕವೇ ಹೊಸ ಕಂಪನಿಗೆ ಭೂಮಿ ಹಂಚಿಕೆ ಮಾಡಬೇಕು. ರೈತರ ಅನುಮತಿಯಿಲ್ಲದೆ ಭೂಮಿ ವಶಪಡಿಸಿಕೊಳ್ಳಲು ಜಿಂದಾಲ್‌ಗೆ ಅವಕಾಶ ನೀಡುವುದಿಲ್ಲ ಎಂದು ಒತ್ತಾಯಿಸಿದರು. ಬಳಿಕ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.