ಜೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ

ಗೊಲ್ಲರಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಕೊಟ್ಟೂರಿನ ಜೆಸ್ಕಾಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಜೆಸ್ಕಾಂ ಎಇಇ ನಾಗರಾಜ್ ಆರ್., ಜೆಇಗಳಾದ ನಾಗರಾಜ, ಚೇತನ್ ಕುಮಾರ್ ಇತರರಿದ್ದರು.
ಗೊಲ್ಲರಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಕೊಟ್ಟೂರಿನ ಜೆಸ್ಕಾಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಜೆಸ್ಕಾಂ ಎಇಇ ನಾಗರಾಜ್ ಆರ್., ಜೆಇಗಳಾದ ನಾಗರಾಜ, ಚೇತನ್ ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ ಅಧಿಕಾರಿಗಳಿಂದ ಲಿಖಿತ ಭರವಸೆ
ಕೊಟ್ಟೂರು: ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಗೊಲ್ಲರಹಳ್ಳಿ ಹಾಗೂ ಸುತ್ತ್ತಲಿನ ನೂರಾರು ರೈತರು ಶುಕ್ರವಾರ ಜೆಸ್ಕಾಂ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಗೀತಾಂಜಲಿ ಸಿಂಧೆ ಮತ್ತು ಸಿಬ್ಬಂದಿ, ಆಕ್ರೋಶಿತ ರೈತರನ್ನು ಸಮಾಧಾನಪಡಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಸಕಾಲದಲ್ಲಿ ಮಳೆಯಾಗದೆ, ಇತ್ತ ಸರಿಯಾಗಿ ವಿದ್ಯುತ್ ಪೂರೈಕೆಯೂ ಇಲ್ಲದೆ ನೀರಿನ ಕೊರತೆಯಿಂದ ಫಸಲು ಒಣಗುತ್ತಿವೆ. ಪಂಪ್‌ಸೆಟ್‌ಗಳಿಗೆ ಏಳು ತಾಸು ವಿದ್ಯುತ್ ನೀಡುವುದಾಗಿ ಹೇಳಿ, ಅರ್ಧ ಗಂಟೆಗೊಮ್ಮೆ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತ ಕೊಟ್ರೇಶಪ್ಪ ಸೇರಿದಂತೆ ಇತರರು ಅಳಲು ತೋಡಿಕೊಂಡರು. ಜಂಗಲ್ ಕಟಿಂಗ್ ಮಾಡದ ಇಲಾಖೆಯ ಬೇಜವಾಬ್ದಾರಿಯೇ ಇಂದಿನ ವಿದ್ಯುತ್ ವ್ಯತ್ಯಯಕ್ಕೆ ಕಾರಣ ಎಂದು ರೈತರು ದೂರಿದರು.
ರೈತರ ದೂರು ಆಲಿಸಿದ ಜೆಸ್ಕಾಂ ಎ.ಇ.ಇ ನಾಗರಾಜ್ ಆರ್. ಮಾತನಾಡಿ, ಗೊಲ್ಲರಹಳ್ಳಿ ಭಾಗದ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9ರಿಂದ 7 ತಾಸು ನಿರಂತರ ವಿದ್ಯುತ್ ಪೂರೈಸಲಾಗುವುದು. ತಾಂತ್ರಿಕ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಿದರೆ ಆ ಸಮಯವನ್ನು ಹೆಚ್ಚಿಸಿ 7 ತಾಸು ಪೂರ್ಣಗೊಳಿಸಿಕೊಡುವುದಾಗಿ ಲಿಖಿತ ಭರವಸೆ ನೀಡಿದರು. ಇದೇ ವೇಳೆ, ಕುಡಿಯುವ ನೀರಿಗಾಗಿ ನೀಡಿರುವ ನಿರಂತರ ಜ್ಯೋತಿ ಸಂಪರ್ಕವನ್ನು ಪಂಪ್‌ಸೆಟ್‌ಗಳಿಗೆ ಅಳವಡಿಸಿಕೊಂಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜೆಸ್ಕಾಂ ಜೆಇಗಳಾದ ನಾಗರಾಜ್, ಚೇತನ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net