ಕಂಪ್ಲಿ: ನೀರು ಬಳಕೆದಾರರ ಸಹಕಾರ ಸಂಘದ ಸಹಕಾರದೊಂದಿಗೆ ರೈತರು ಪಟ್ಟಣದ ವಿಜಯನಗರ ಮುಖ್ಯ ಕಾಲುವೆಯಲ್ಲಿನ ಕಸ, ಆಪು, ಹೂಳನ್ನು ಬುಧವಾರ ತೆಗೆದರು.
ವಿಜಯನಗರ ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಗಂಗಣ್ಣ ಮಾತನಾಡಿ, 1.8 ಕಿ.ಮೀ.ನಿಂದ 6.3 ಕಿ.ಮೀ.ತನಕ ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ನಾಲೆ ಕೊನೆಯ ಭಾಗಕ್ಕೆ ನೀರು ತಲುಪಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಕಾಲುವೆಯಲ್ಲಿನ ಹೂಳನ್ನು ತೆಗೆಯುತ್ತಿದ್ದಾರೆ. ಇದರಿಂದ ಕಂಪ್ಲಿ ಕೋಟೆ, ಬೆಳಗೋಡು, ಅರಳಿಹಳ್ಳಿ, ಸಣಾಪುರ ಮಾಗಾಣಿಯ ಸುಮಾರು 1500 ರಿಂದ ಎರಡು ಸಾವಿರ ಎಕರೆ ಜಮೀನಿಗೆ ನೀರು ಹರಿಯಲಿದೆ. ನಿತ್ಯ 120ರಿಂದ 130 ರೈತರು ಹೂಳು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಅಶೋಕ, ನಿರ್ದೇಶಕ ವಿರುಪಣ್ಣ, ರೈತರಾದ ಬೆಳಗೋಡು ವಿರೂಪಾಕ್ಷಿ, ಬೆಳಗೋಡು ಬಸವರಾಜ, ಕಂಪ್ಲಿ, ಬೆಳಗೋಡುಹಾಳು, ಸಣಾಪುರ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು.