ಎಲ್ಲೆಲ್ಲೂ ಧೂಳು ಸವಾರರಿಗೆ ಗೋಳು

ಹೊಸಪೇಟೆ ತಾಲೂಕಿನ ಜಿ.ನಾಗಲಾಪುರದ ಬಳಿ ರಸ್ತೆ ದುಸ್ಥಿತಿಯಲ್ಲಿರುವುದು. ಜಿ.ನಾಗಲಾಪುರದಲ್ಲಿ ಲಾರಿ ಸಂಚರಿಸುವಾಗ ರಸ್ತೆ ಧೂಳುಮಯವಾಗಿರುವುದು.
ಹೊಸಪೇಟೆ ತಾಲೂಕಿನ ಜಿ.ನಾಗಲಾಪುರದ ಬಳಿ ರಸ್ತೆ ದುಸ್ಥಿತಿಯಲ್ಲಿರುವುದು. ಜಿ.ನಾಗಲಾಪುರದಲ್ಲಿ ಲಾರಿ ಸಂಚರಿಸುವಾಗ ರಸ್ತೆ ಧೂಳುಮಯವಾಗಿರುವುದು.
Published on
ಮಂಜುನಾಥ ಅಯ್ಯಸ್ವಾಮಿ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಒಂದೆಡೆ ಕಾರ್ಖಾನೆಗಳ ಧೂಳಿನಿಂದ ಜನರು ಕಂಗೆಟ್ಟಿದ್ದರೆ, ಇನ್ನೊಂದೆಡೆ ಡಾಂಬರೀಕರಣ ಕಾಣದ ರಸ್ತೆಗಳಿಂದ ಹೊರಹೊಮ್ಮುವ ಧೂಳಿನಿಂದ ಪರದಾಡುತ್ತಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮುಂಗಾರಿನಲ್ಲಿ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಗೊಲ್ಲರಹಳ್ಳಿ-ಯಶವಂತನಗರ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಧೂಳು ಮೆತ್ತಿಕೊಳ್ಳುತ್ತಿದೆ. ಮಳೆ ಬಂದಾಗ ಕೆಸರಿನಲ್ಲಿ ಓಡಾಡುವ ಜನರು ಇದೀಗ ಧೂಳಿನಲ್ಲಿ ಸಂಚರಿಸಬೇಕಾಗಿದೆ. ಬಹುತೇಕ ಗ್ರಾಮಗಳಲ್ಲಿ ಮನೆ, ವಾಹನ ಸೇರಿದಂತೆ ಎಲ್ಲೆಲ್ಲೂ ಧೂಳು ಸಾಮಾನ್ಯವಾಗಿದೆ. ಬೈಕ್ ಸವಾರರು ಧೂಳಿನಿಂದಾಗಿ ಅಪಘಾತದ ಭೀತಿಯಲ್ಲೇ ಸಂಚರಿಸುವಂತಾಗಿದೆ. ರಸ್ತೆ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಹಾಗೂ ಜಿಪಂ ನಿರ್ಲಕ್ಷೃ ವಹಿಸಿವೆ ಎಂಬುದು ಜನರ ಆರೋಪವಾಗಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ಗೊಲ್ಲರಹಳ್ಳಿ, ನಾಗಲಾಪುರ, ಗರಗ, ಬ್ಯಾಲಕುಂದಿ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರ್ ಹಾಕದೆ ಜಲ್ಲಿ ಹುಡಿ ಹಾಕಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿ ಭಾರಿ ಗಾತ್ರದ ಗಣಿ ಲಾರಿಗಳ ಸಂಚಾರ ಹೆಚ್ಚಾಗಿರುತ್ತದೆ. ಇದರಿಂದಾಗಿ ರಸ್ತೆ ಯಾವಾಗಲೂ ಧೂಳುಮಯವಾಗಿರುತ್ತದೆ. ಮಂಜು ಮುಸುಕಿದಂತೆ ಭಾಸವಾಗುತ್ತದೆ.
ರಸ್ತೆಗೆ ನೀರಿನ ಸಿಂಪಡಣೆ ಕೂಡ ಮಾಡದ ಹಿನ್ನೆಲೆಯಲ್ಲಿ ಧೂಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ. ಇದರಿಂದಾಗಿ ಅಲರ್ಜಿಯಾಗಿ ಉಸಿರಾಟದ ಸಮಸ್ಯೆ ಇತ್ಯಾದಿ ರೋಗಬಾಧೆ ಗ್ರಾಮಸ್ಥರನ್ನು ಕಾಡುತ್ತಿವೆ. ಗಂಟಲ ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿವೆ.

ಸಿಸಿ ರಸ್ತೆಗೆ ಪ್ರಸ್ತಾವನೆ

ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50ರಿಂದ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರದವರೆಗೆ 19.5 ಕಿಮೀ ರಸ್ತೆಯಿದ್ದು, 13 ಕಿಮೀ. ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿದೆ. ಈ ರಸ್ತೆ ಅಭಿವೃದ್ಧಿ ಮಾಡಲು ಸಂಡೂರು ತಾಲೂಕಿನ ಅಧಿಕಾರಿಗಳ ಸಮನ್ವಯದೊಂದಿಗೆ ಕೆಎಂಇಆರ್‌ಸಿ ಯೋಜನೆಯಲ್ಲಿ 58.6 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"

ಗ್ರಾಮದಲ್ಲಿ ದಿನೇ ದಿನೆ ಧೂಳು ಹೆಚ್ಚುತ್ತಿದೆ. ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿ ಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

"

ರಾಷ್ಟ್ರೀಯ ಹೆದ್ದಾರಿ 50 ರಿಂದ ಜಿ.ನಾಗಲಾಪುರ ಮಾರ್ಗವಾಗಿ ಯಶವಂತನಗರದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ರಸ್ತೆ ನಿರ್ಮಾಣ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net