ಬಳ್ಳಾರಿಯ ಕೆನರಾ ಬ್ಯಾಂಕ್ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್ ವಿ.ಕುಲಕರ್ಣಿ, ನಿರ್ದೇಶಕ ವಿನಯಕುಮಾರ ಬಿ.ಕೊಳ್ಳುರಮಠ, ಸಿಬ್ಬಂದಿ ಜಡೇಪ್ಪ, ಸಿದ್ದಲಿಂಗಮ್ಮ, ಸಂತೋಷ ಕುಮಾರ, ಪರಮೇಶ ಇದ್ದರು.
ಬಳ್ಳಾರಿ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಹೇಳಿದರು. ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಪಂ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಚಾಲನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಕಡ್ಡಾಯವಾಗಿ ಮರ ಬೆಳೆಸಬೇಕು. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಕಿವಿಮಾತು ಹೇಳಿದರು. ಫೊಟೋಗ್ರಾಫಿ ಉದ್ಯಮವು ಇಂದು ಅತ್ಯಂತ ಜನಪ್ರಿಯ ಹಾಗೂ ಲಾಭದಾಯಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಯುವಕರು ಆಸಕ್ತಿಯಿಂದ ತರಬೇತಿ ಪಡೆದು ಸ್ವಾವಲಂಬಿ ಯಶಸ್ವಿ ಉದ್ಯಮಿಗಳಾಗಬೇಕು ಎಂದರು.