ಸಿರಿಗೇರಿ: ಶಾಲಾ ಆರಂಭೋತ್ಸವ ಮತ್ತು ಶಿಕ್ಷಕ, ಪಾಲಕರ ಮಹಾಸಭೆ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸೋಮವಾರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರಭಾರ ಮುಖ್ಯಶಿಕ್ಷಕ ಗೋವಿಂದರಾಜ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.
ಸಿಆರ್‌ಪಿ ಬಿ.ಆರ್.ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಹಾಲು, ಮೊಟ್ಟೆ, ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ಕೆಮಾಡಿಕೊಳ್ಳಬೇಕು. ಈ ವರ್ಷ ಆಂಗ್ಲ ಮಾಧ್ಯಮದಲ್ಲಿ ಎಲ್ಕೆಜಿ ಮತ್ತು ಯುಕೆಜಿಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಸಿಹಿ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಗುರಟ್ಟಿ ಶಿವರಾಮ್, ಉಪಾಧ್ಯಕ್ಷ ಪೋತಯ್ಯ, ಶಿಕ್ಷಕರಾದ ಜೆ.ಕೆ.ಗುರುಸ್ವಾಮಿ, ಚೈತ್ರಾ ಪಿ.ಎಂ., ಚಂದ್ರಶೇಖರ್, ಎಚ್.ಮಲ್ಲಯ್ಯ, ಮಂಜುನಾಥ, ಲಕ್ಷ್ಮೀ, ಮುತ್ತಮ್ಮ ಇತರರು ಇದ್ದರು.