ಶಾನವಾಸಪುರದಲ್ಲಿ ಆಯೋಜಿಸಿದ್ದ ಗ್ರಾಮೀಣ ಕಲೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡಿ ಬಿ.ನಾಗರಾಜ ಉದ್ಘಾಟಿಸಿದರು. ಬಿಸಿಎಂ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಎಚ್.ತಿಪ್ಪೇಸ್ವಾಮಿ, ಪಿಡಿಒ ವೀರೇಶ, ಪ್ರಮುಖರಾದ ಎಂ.ಈರಪ್ಪ, ವೈ.ನಾಗರಾಜ, ಸೋಮಪ್ಪ, ರಾಮಪ್ಪ, ಅಕ್ಬರಸಾಬ, ತಿಪ್ಪೇರುದ್ರಗೌಡ, ಅಯ್ಯಪ್ಪ, ಬೈಲೂರು ನಾಗರಾಜ, ನೇತ್ರಕಲಾ ಸಂಘದ ಕಾರ್ಯದರ್ಶಿ ವೀರೇಶ ದಳವಾಯಿ ಇತರರಿದ್ದರು.
ಸಿರಿಗೇರಿ: ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಹೇಳಿದರು.
ಶಾನವಾಸಪುರ ಗ್ರಾಮದ ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿರಗುಪ್ಪದ ನೇತ್ರ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಿನ ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿರುವ ಕಲಾ ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ಅಸಂಘಟಿತ ಕಲಾವಿದರಿಗೂ ಪ್ರತಿವರ್ಷವು ಧನಸಹಾಯ ನೀಡಲಾಗುತ್ತಿದೆ. ಅದರಂತೆ ನೇತ್ರಕಲಾ ಸಂಘ 15 ವರ್ಷಗಳಿಂದ ನಿರಂತರ ಸಾಂಸ್ಕೃತಿಕ ಸಾಹಿತ್ಯಕ ಸಾಮಾಜಿಕ ಸೇವೆ ಜತೆಗೆ ಬೀದಿನಾಟಕ, ಆರೋಗ್ಯ ಜಾಗೃತಿ, ಬಾಲ್ಯವಿವಾಹ, ಅಸ್ಪೃಶ್ಯತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ ಎಂದರು.
ಬಿಸಿಎಂ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸಿ, ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳ ಅವಶ್ಯ ಇದೆ. ಜಾನಪದ ಕಲೆಗಳನ್ನು ಯುವಪೀಳಿಗೆ ಉಳಿಸಬೇಕು. ಜತೆಗೆ ಕ್ರೀಡೆ, ಶಿಕ್ಷಣ, ಕೃಷಿ, ಅಧ್ಯಾತ್ಮ, ಸಾಮಾಜಿಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ.ಮಹಾದೇವಿ ಸಿರಗುಪ್ಪ ತಂಡದಿಂದ ಸುಗಮ ಸಂಗೀತ, ಮುತ್ತಣ್ಣ ಕುಡುದ್ರಾಳ್ ತಂಡದಿಂದ ಜಾನಪದ ಸಂಗೀತ, ದೊಡ್ಡ ಹುಸೇನಪ್ಪ ಅರಳಿಗನೂರು ತಂಡದಿಂದ ವಚನ ಸಂಗೀತ, ಹರಿಕೃಷ್ಣ ಸಂಗನಕಲ್ಲು ತಂಡದಿಂದ ಡೊಳ್ಳು ಕುಣಿತ, ದಾಸರ ಶೇಕ್ಷಾವಲಿ ತಂಡದಿಂದ ತತ್ವಪದ ಗಾಯನ ಹಾಗೂ ಸುಮಿತ್ರಾ ಮಾನ್ವಿ ತಂಡದಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ, ಮರಿಯಮ್ಮನಹಳ್ಳಿಯ ಹನುಮಯ್ಯ ಕಂಠದಲ್ಲಿ ಮಹರ್ಷಿ ವಾಲ್ಮೀಕಿ ಗೀತೆ ಪ್ರಸ್ತುತಗೊಂಡವು.