ಬಳ್ಳಾರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರಗೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮನವಿ ಸಲ್ಲಿಸಿದರು. ಪ್ರಮುಖರಾದ ವಿ.ವೀರೇಶ್, ಕಾಗೆ ಈರಣ್ಣ, ಕಂಠಂನೇನಿ ರವಿಚಂದ್ರ ಇತರರಿದ್ದರು.
ಕಂಪ್ಲಿ: ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ಕರ್ನಾಟಕ ಆಂದ್ರ ಜಂಟಿ ಕೋಟಾದ ನೀರು ಹರಿಸುವ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರಗೆ ಶನಿವಾರ ಬಳ್ಳಾರಿಯಲ್ಲಿ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಜಲಾಶಯದಲ್ಲಿ 92ಟಿಎಂಸಿ ನೀರು ಸಂಗ್ರಹ ಹಾಗೂ ಒಳ ಹರಿವು ಇದ್ದು ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ 2 ರಾಜ್ಯಗಳ ಜಂಟಿ ಕೋಟಾದ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಕಾಲುವೆಗಳಿಗೆ ನೀರು ಬಿಟ್ಟರೂ ಬೆಳೆಗೆ ನೀರು ತಲುಪುವುದಿಲ್ಲ.
ಕಾಲುವೆಯಲ್ಲಿ 2.5 ಅಡಿ ನೀರು ರಾಜ್ಯದ ರೈತರಿಗೆ ದಕ್ಕದೆ ವೃತಾ ಆಂದ್ರಕ್ಕೆ ಹರಿಯುತ್ತದೆ. ಕರ್ನಾಟಕ-ಆಂದ್ರ ರೈತರು ಈತನಕ ಸ್ನೇಹಪೂರ್ವಕವಾಗಿ ಸಾಗಿದ್ದು ಜಂಟಿ ನೀರು ಹರಿಸುವ ಮೂಲಕ ಸ್ನೇಹಪರ ವಾತಾವರಣ ಮುಂದುವರೆಸಲು ಬೋರ್ಡ್ ಅಧಿಕಾರಿಗಳು ಮುಂದಾಗಬೇಕು. ರೈತರು ಬೆಳೆ ಉಳಿಸಿಕೊಳ್ಳಲು ನೀರು ಪಡೆಯುವ ಯತ್ನವನ್ನು ಅಧಿಕಾರಿಗಳು ತಡೆಯಬಾರದು.
ಬೆಳೆಗೆ ನೀರು ಒದಗಿಸದಿದ್ದರೆ ಎಕರೆಗೆ 50ಸಾವಿರ ರೂ. ನಷ್ಟ ಪರಿಹಾರ ನೀಡಬೇಕು. ಆ.16ರೊಳಗೆ ಜಂಟಿ ನೀರು ಹರಿಸದಿದ್ದಲ್ಲಿ ಟಿಬಿ ಬೋರ್ಡ್ ಸೆಕ್ರೆಟರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.