ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಚಾಲನೆ ನೀಡಿದರು. ಎಡಿಸಿ ಮಹಮ್ಮದ್ ಎನ್.ಜುಬೇರ್, ನ್ಯಾ.ರಾಜೇಶ್ ಎನ್.ಹೊಸಮನೆ, ಉಪವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ. ಖೈನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ ಎಂ., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ ಇತರರಿದ್ದರು.
ಬಳ್ಳಾರಿ : ಪ್ರತಿ ಮಗುವಿಗೂ ಕಡ್ಡಾಯವಾಗಿ ಮೂಲಭೂತ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ನಾಗರಿಕ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಹೆಣ್ಣಾಗಲಿ ಅಥವಾ ಗಂಡಾಗಲಿ, ಪ್ರತಿಯೊಬ್ಬ ಮಗುವಿಗೂ ಮೂಲಭೂತ ಶಿಕ್ಷಣ ಪಡೆಯುವ ಹಕ್ಕಿದೆ. ಇದನ್ನು ಯಾವುದೇ ಕಾರಣಕ್ಕೂ ಯಾರು ಕಸಿದುಕೊಳ್ಳಬಾರದು. ಹಿಂದಿನ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ದಿನಗಳಲ್ಲಿ ಬಾಲಕಾರ್ಮಿಕ ಪದ್ಧತಿ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ, ಇದು ಸಮಾಜದಿಂದ ಸಂಪೂರ್ಣವಾಗಿ ತೊಲಗಿಲ್ಲ ಎಂದರು.
ನಾಗರಿಕರು ಕೇವಲ ಸರ್ಕಾರದ ಉದ್ಯೋಗಗಳ ಮೇಲಷ್ಟೇ ಅವಲಂಬಿತರಾಗದೆ, ಸರ್ಕಾರದ ವಿವಿಧ ಸ್ವಯಂ-ಉದ್ಯೋಗ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ತಾವೇ ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಘನತೆಯಿಂದ ಬದುಕುವಂತಾಗಬೇಕು ಎಂದರು. ಶಾಲಾ ಮಕ್ಕಳು ಒಳಗೊಂಡ ಜಾಥಾವು ಡಿಸಿ ಕಚೇರಿಯಿಂದ ಪ್ರಾರಂಭಗೊಅಡು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಿತು. ಮಾರ್ಗದುದ್ದಕ್ಕೂ ಮಕ್ಕಳ ಕೈಯಲ್ಲಿ ಜಾಗೃತಿ ಫಲಕಗಳು ರಾರಾಜಿಸಿದವು.