ಕಂಪ್ಲಿ ಜೆಸ್ಕಾಂ ಎಇಇ ಕಚೇರಿಗೆ ಗ್ರಹಣ

ಕಂಪ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಿಸುವಲ್ಲಿ ಬೆಳೆದು ನಿಂತ ಮರಗಿಡಗಳು.
ಕಂಪ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಿಸುವಲ್ಲಿ ಬೆಳೆದು ನಿಂತ ಮರಗಿಡಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮರ-ಗಿಡಗಳಲ್ಲಿ ಸಿಲುಕಿದ 1.50 ಕೋಟಿ ರೂ. ಕಟ್ಟಡ ಕಾಮಗಾರಿ
ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶಾಸಕರಿಂದ ಭೂಮಿಪೂಜೆಯೂ ಆಗಿದೆ. ಆದರೂ ಕಂಪ್ಲಿ ಜೆಸ್ಕಾಂ ಉಪ ವಿಭಾಗ (ಎಇಇ) ಕಚೇರಿ ಕಟ್ಟಡ ಕಾಮಗಾರಿ ಆರಂಭಗೊಳ್ಳಲು ಹತ್ತು ಮರಗಿಡಗಳು ಅಡ್ಡಗೋಡೆಯಾಗಿವೆ. ಅರಣ್ಯ ಇಲಾಖೆಯ ಅನುಮತಿಗಾಗಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಉನ್ನತೀಕರಣಗೊಂಡು ಎರಡು ವರ್ಷ ಕಳೆದರೂ ಎಇಇ ಕಚೇರಿಗೆ ಸ್ವಂತ ಸೂರಿನ ಭಾಗ್ಯ ಕೂಡಿ ಬಂದಿಲ್ಲ.
2024ರ ಆ.9ರಂದು ಇಲ್ಲಿನ ಜೆಸ್ಕಾಂ ಸಹಾಯಕ ಇಂಜಿನಿಯರ್(ವಿ) ಕಾರ್ಯಪಾಲನಾ ಶಾಖೆಯನ್ನು ಉಪ ವಿಭಾಗ (ಎಇಇ) ಕಚೇರಿಯಾಗಿ ಉನ್ನತೀಕರಿಸಲಾಗಿತ್ತು. ಆದರೆ ಉನ್ನತೀಕರಣಗೊಂಡು ಎರಡು ವರ್ಷಗಳಾಗುತ್ತ ಬಂದರೂ ಪ್ರತ್ಯೇಕ ಕಟ್ಟಡ ನಿರ್ಮಾಣವಾಗದ ಕಾರಣ ಸಹಾಯಕ ಇಂಜಿನಿಯರ್ ಕಾರ್ಯಪಾಲನಾ ಶಾಖೆಯ ಕಟ್ಟಡದಲ್ಲಿಯೇ ಎಇಇ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ಎಇಇ ಕಚೇರಿ ಕಟ್ಟಡ ನಿರ್ಮಾಣದ ಅಗತ್ಯತೆಯನ್ನು ಮನಗಂಡು ಶಾಸಕ ಜೆ.ಎನ್.ಗಣೇಶ್ ಅವರು 2025-26ನೇ ಸಾಲಿನ ಜೆಸ್ಕಾಂ ಅನುದಾನ ಯೋಜನೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ 2026ರ ಏ.18ರಂದು ಭೂಮಿ ಪೂಜೆ ನೆರವೇರಿಸಿದ್ದರು. ಗುಣಮಟ್ಟದ ಕಟ್ಟಡವನ್ನು ನಿಗದಿತ ಅವಧಿಯಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ಭೂಮಿಪೂಜೆ ನಡೆದು ತಿಂಗಳು ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ.
ಎಇಇ ಕಚೇರಿ ನಿರ್ಮಿಸಲು ಉದ್ದೇಶಿಸಿರುವ ಜೆಸ್ಕಾಂ ಕಚೇರಿ ಆವರಣದಲ್ಲಿ ಹತ್ತು ಮರಗಿಡಗಳು ಬೆಳೆದು ನಿಂತಿದ್ದು, ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಜೆಸ್ಕಾಂ ಕಚೇರಿಯಿಂದ ಮರಗಿಡಗಳ ತೆರವಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗುತ್ತಿಗೆದಾರರು ಮರಗಿಡಗಳನ್ನು ತೆರವುಗೊಳಿಸುವಲ್ಲಿನ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಿದೆ.
"

ಜೆಸ್ಕಾಂ ಕಚೇರಿ ಆವರಣದಲ್ಲಿ ಎಇಇ ಕಚೇರಿ ನಿರ್ಮಾಣ ಮಾಡುವಲ್ಲಿ ಹತ್ತು ಮರಗಿಡಗಳಿದ್ದು ತೆರವುಗೊಳಿಸಲು ಅರಣ್ಯ ಇಲಾಖೆಯ ಒಪ್ಪಿಗೆ ಅಗತ್ಯವಿದೆ. ಅರಣ್ಯ ಇಲಾಖೆ ಮರಗಿಡಗಳನ್ನು ತೆರವುಗೊಳಿಸಿದಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

— ಕೆ. ಶ್ರೀನಿವಾಸಪ್ರಸಾದ್ ಎಇಇ, ಜೆಸ್ಕಾಂ, ಕಂಪ್ಲಿ
"

ಜೆಸ್ಕಾಂ ಕಚೇರಿಯಲ್ಲಿನ ಮರಗಿಡಗಳನ್ನು ತೆರವುಗೊಳಿಸಲು ವಲಯ ಅರಣ್ಯಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಟೆಂಡರ್ ಕರೆದು ಮರಗಿಡಗಳನ್ನು ತೆರವುಗೊಳಿಸಲಾಗುವುದು.

— ಕೌಶಿಕ್ ದಳವಾಯಿ ವಲಯ ಅರಣ್ಯ ಅಧಿಕಾರಿ, ಹೊಸಪೇಟೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net