ನೀರಾವರಿ ಸಲಹಾ ಸಮಿತಿ ಸಭೆ ಶೀಘ್ರ

ಸಿರಗುಪ್ಪ ತಾಲೂಕಿನ ಸಿದ್ದರಾಂಪುರ ಗ್ರಾಮದ ಜಮೀನೊಂದರಲ್ಲಿ ಹಾಳಾಗಿರುವ ಸಜ್ಜೆ ಬೆಳೆಯನ್ನು ಸಚಿವ ಬಿ.ನಾಗೇಂದ್ರ ಪರಿಶೀಲಿಸಿದರು. ಶಾಸಕ ಬಿ.ಎಂ. ನಾಗರಾಜ, ಡಿಸಿ ಕೆ.ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಸೋಮಸುಂದರ್, ತಹಸೀಲ್ದಾರ್ ಗೌಸಿಯಾ ಬೇಗಂ ಇತರರಿದ್ದರು.
ಸಿರಗುಪ್ಪ ತಾಲೂಕಿನ ಸಿದ್ದರಾಂಪುರ ಗ್ರಾಮದ ಜಮೀನೊಂದರಲ್ಲಿ ಹಾಳಾಗಿರುವ ಸಜ್ಜೆ ಬೆಳೆಯನ್ನು ಸಚಿವ ಬಿ.ನಾಗೇಂದ್ರ ಪರಿಶೀಲಿಸಿದರು. ಶಾಸಕ ಬಿ.ಎಂ. ನಾಗರಾಜ, ಡಿಸಿ ಕೆ.ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಸೋಮಸುಂದರ್, ತಹಸೀಲ್ದಾರ್ ಗೌಸಿಯಾ ಬೇಗಂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಂತ್ರಿ ಬಿ. ನಾಗೇಂದ್ರ ಹೇಳಿಕೆ
  • ಮೂರು ತಾಲೂಕಿನಲ್ಲಿ ಬರ ಅಧ್ಯಯನ

ಬಳ್ಳಾರಿ:

ಜಿಲ್ಲೆಯ ಸಂಡೂರಿನ ವಿಠಲಾಪುರ, ಕುರುಗೋಡಿನ ಸಿಂಧಗೇರಿ ಹಾಗೂ ಸಿರಗುಪ್ಪದ ಸಿದ್ದರಾಂಪುರ ಗ್ರಾಮಗಳಿಗೆ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಸಚಿವ ಬಿ.ನಾಗೇಂದ್ರ ಶುಕ್ರವಾರ ಭೇಟಿ ನೀಡಿ ಬರ ಅಧ್ಯಯನ ಮಾಡಿದರು.

ಬಳಿಕ ಸಚಿವ ಬಿ.ನಾಗೇಂದ್ರ ಮಾತನಾಡಿ, ವೀಕ್ಷಣೆ ಮಾಡಿದ ಮೂರು ತಾಲೂಕುಗಳಲ್ಲಿ ಮಳೆಯಾಶ್ರಿತ ಸಣ್ಣ ಹಾಗೂ ಅತಿ ಸಣ್ಣ ರೈತರೇ ಹೆಚ್ಚಾಗಿದ್ದು, ಬರಪರಿಸ್ಥಿತಿ ತೀವ್ರವಾಗಿದೆ. ಒಂದು ಅಥವಾ ಐದು ಎಕರೆ ಒಳಗಿನ ಹಿಡುವಳಿದಾರರಿಗೆ ಬೆಳೆ ನಷ್ಟದಿಂದ ಬದುಕು ಸಾಗಿಸುವುದು ಕಷ್ಟವಾಗಿದೆ. ಈ ಕುರಿತು ಶೀಘ್ರವೇ ಸಿಎಂಗೆ ವರದಿ ಸಲ್ಲಿಸಲಾಗುವುದು ಹಾಗೂ ಮುಂಬರುವ ಸಭೆಯಲ್ಲಿ ಪರಿಹಾರ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಡೂರು ವ್ಯಾಪ್ತಿಯ ಕೈಗಾರಿಕೆಗಳಿಂದ ಧೂಳು ಹೆಚ್ಚಾಗುತ್ತಿದ್ದು, ಕೆರೆಗಳಿಗೆ ಕಲುಷಿತ ನೀರು ಬಿಡಲಾಗುತ್ತಿದೆ. ಇದರಿಂದ ಮೀನುಗಳು ಸಾಯುತ್ತಿದ್ದು, ನೀರು ಕುಡಿದ ಜನರಿಗೆ ಮೂಳೆ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕರೆಸಿ ಶೀಘ್ರವೇ ಸಭೆ ನಡೆಸಲಾಗುವುದು. ಕೈಗಾರಿಕೆಗಳು ವೈಜ್ಞಾನಿಕವಾಗಿ ಫಿಲ್ಟರ್‌ಗಳನ್ನು ಅಳವಡಿಸಿ ಮಾಲಿನ್ಯ ನಿಯಂತ್ರಿಸಲು ಕಡ್ಡಾಯಗೊಳಿಸಲಾಗುವುದು. ರೈತರು ದೂರದ ಪ್ರದೇಶಗಳಿಗೆ ಜಾನುವಾರುಗಳು ಕರೆದೊಯ್ಯುವುದು ತಪ್ಪಿಸಲು ಆಯಾ ಪಂಚಾಯಿತಿ ಮಟ್ಟದಲ್ಲೇ ಮೇವು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುರುಗೋಡು ಹಾಗೂ ಸಿರಗುಪ್ಪ ಭಾಗದಲ್ಲಿ ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳು ಹರಿದು ಹೋಗಿವೆ. ಹೀಗಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದರೆ ಭತ್ತ ಇತರ ಬೆಳೆ ನಾಟಿ ಮಾಡಲು ಅನುಕೂಲವಾಗಲಿದೆ. ಆದ್ದರಿಂದ, ಸದ್ಯದಲ್ಲಿಯೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. .
ಸಿಂಧಗೇರಿ ಗ್ರಾಮದ ರೈತ ಗೋವಿಂದಪ್ಪ ಮಾತನಾಡಿ, ಕೊಳವೆ ಬಾವಿ ನೆರವಿನಿಂದ ಈಗಾಗಲೇ ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ ಕೆಂಪು ರೋಗದಿಂದ ಬೆಳೆ ಹಾಳಾಗಿದೆ. ಹೀಗಾಗಿ ನಾಲೆಗೆ ನೀರು ಬಂದಾಗ ಬಿಳಿ ಜೋಳ ಬಿತ್ತನೆ ಮಾಡಬೇಕು. ಆದರೆ ಕುಡತಿನಿ ಬಳಿಯ ಡಿ7 ಉಪಕಾಲುವೆಯಿಂದ ಹರಿಸುವ ನೀರು ದೂರದ ಗ್ರಾಮಗಳಿಗೆ ತಲುಪುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಅಸಮಾಧಾನ ಹೊರಹಾಕಿದ ಶಾಸಕ

ಬರ ವೀಕ್ಷಣೆಗೆ ಸಚಿವರಿಗೆ ಸಾಥ್ ನೀಡಬೇಕಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಯಾರಿಗೆ ಕೊಟ್ಟರೂ ಬೆಂಬಲಿಸುವ ಮಾತಾಡಿದ್ದ ಶಾಸಕ, ಸಚಿವ ಸ್ಥಾನಕ್ಕಾಗಿ ಬೆಂಗಳೂರಲ್ಲಿ ಬೀಡುಬಿಟ್ಟಿದ್ದರು. ಆದರೆ ಕೇಂದ್ರ ನಾಯಕರು ಬಿ. ನಾಗೇಂದ್ರಗೆ ಮಣೆ ಹಾಕಿದ್ದರಿಂದ ಕ್ಷೇತ್ರದಲ್ಲಿದ್ದರೂ ಸ್ಥಳಕ್ಕೆ ಸುಳಿಯದೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂಬ ಮಾತುಗಳು ಜನರಿಂದ ವ್ಯಕ್ತವಾದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net