ಅಕ್ರಮ ಬೆಳೆ ಸಮೀಕ್ಷೆಗೆ ಡ್ರೋನ್ ಸರ್ವೇ

ಅಕ್ರಮ ಬೆಳೆ ಸಮೀಕ್ಷೆಗೆ ಡ್ರೋನ್ ಸರ್ವೇ
ಅಕ್ರಮ ಬೆಳೆ ಸಮೀಕ್ಷೆಗೆ ಡ್ರೋನ್ ಸರ್ವೇ
Published on

ಪ್ರಮುಖ ಮುಖ್ಯಾಂಶಗಳು

  • ಸಿರಿಧಾನ್ಯ
ಬಳ್ಳಾರಿ : ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಸೌಲಭ್ಯ ಪಡೆಯುವ ಉದ್ದೇಶದಿಂದ ಅಕ್ರಮ ಬೆಳೆ ಸಮೀಕ್ಷೆಯಾಗುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮೊದಲ ಬಾರಿಗೆ ಡ್ರೋನ್ ಮೂಲಕ ಸರ್ವೇ ನಡೆಸಲು ಉದ್ದೇಶಿಸಿದೆ.
ಪ್ರಸ್ತಕ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಿರು ಸಿರಿಧಾನ್ಯಗಳಾದ ಸಾಮೆ, ನವಣೆ, ರಾಗಿ, ಜೋಳ, ಮೆಕ್ಕೆಜೋಳ ಬೆಳೆಗಳನ್ನು ಖರೀದಿಸಲಾಗುತ್ತಿದೆ. ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಡಿ ಬೆಳೆದ ಬೆಳೆಯನ್ನು ನೊಂದಯಿಸಿಕೊಳ್ಳಬೇಕು. ಈ ಬಾರಿ ಎಂಎಸ್‌ಪಿಯಡಿ ಧಾನ್ಯಗಳ ಬೆಲೆ ಏರಿಕೆಗೊಂಡಿದೆ. ಹೀಗಾಗಿ ಕೆಲವೊಂದು ಪಾಳು ಬಿದ್ದ ಭೂಮಿ ಹಾಗೂ ಬೆಂಬಲ ಬೆಲೆಯಡಿ ಬೆಳೆಯದ ಬೆಳೆಯನ್ನು ರಾಗಿ, ಜೋಳ ಎಂಬುದಾಗಿ ಕೃಷಿ ಇಲಾಖೆಯ ಕೆಲ ಅಧಿಕಾರಿಗಳ ಕುಮ್ಮುಕ್ಕಿನಿಂದ ಬೆಳೆ ಸಮೀಕ್ಷೆಯಲ್ಲಿ ನಮೂದಿಸಿ ಎಂಎಸ್‌ಪಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಈಗಾಗಲೇ ಮುಂಗಾರಿನಲ್ಲಿ ಬೆಳೆದಿರುವ ಮೆಕ್ಕಜೋಳ, ಜೋಳ ನೋಂದಣಿ ಪೂರ್ಣಗೊಂಡಿದ್ದು ಇನ್ನೂ ರಾಜ್ಯಾದ್ಯಾಂತ ಸಾವಿರಾರು ರೈತರು ನೊಂದಣಿಯಾಗದೆ ಪೂರ್ಣಗೊಂಡಿದೆ. ಆದ್ದರಿಂದ, ರಾಜ್ಯದಲ್ಲೇ ಮೊದಲ ಬಾರಿಗೆ ಈಗಾಗಲೇ ನೊಂದಣಿಯಾಗಿರುವ ರೈತರ ಭೂಮಿಗಳನ್ನು ಜಿಲ್ಲಾಧಿಕಾರಿ ನೇತೃತ್ವದ ತಂಡವೂ ಡ್ರೋನ್ ಮೂಲಕ ಸರ್ವೇ ನಡೆಸಿ ಆ ಭೂಮಿಯಲ್ಲಿ ಎಂಎಸ್‌ಪಿಯಡಿ ಬೆಳೆಯಲ್ಲದೆ ಪರ್ಯಾಯ ಬೆಳೆ ಬೆಳೆದಿದ್ದರೆ ನೊಂದಣಿ ರದ್ದುಗೊಳಿಸಲು ಉದ್ದೇಶಿಸಿದೆ. ಇದರಿಂದ ಅಕ್ರಮವಾಗಿ ಸಮೀಕ್ಷೆಗೊಂಡವರು ಹೊರ ಹಾಕಿ, ಎಂಎಸ್‌ಪಿಯಡಿ ಬೆಳೆದವರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರಾಥಮಿಕವಾಗಿ ಜೋಳದ ಬೆಳೆ ಡ್ರೋನ್ ಮೂಲಕ ಸಮೀಕ್ಷೆ ನಡೆಯಲಿದ್ದು, ಹಂತ ಹಂತವಾಗಿ ಬೇರೆ ಬೇರೆ ಬೆಳೆಯ ಸರ್ವೇ ನಡೆಯಲಿದೆ.
ಯಾವ ದರ ಎಷ್ಟು : ರಾಜ್ಯ ಸರ್ಕಾರ ಎಂಎಸ್‌ಪಿ ಯೋಜನೆಯಡಿ ಪ್ರತಿ ಕಿಂಟ್ವಾಲ್‌ಗೆ ಬಿಳಿ ಜೋಳ (ಹೈಬ್ರೀಡ್) 3699 ರೂ., ಬಿಳಿ ಜೋಳ (ಮಾಲ್ದಂಡಿ) 3749 ರೂ., ರಾಗಿ 4886 ರೂ., ಸಾಮೆ ಮತ್ತು ನವಣೆ 4886 ರೂ., ಭತ್ತ 2360 ರೂ., ಮೆಕ್ಕೆಜೋಳ 2200 ರೂ. ದರ ನಿಗದಿಗೊಳಿಸಲಾಗಿದೆ. ಎಕರೆಗೆ 15 ಕ್ವಿಂಟಾಲ್ ಗರಿಷ್ಠ ಒಬ್ಬರಿಗೆ 150 ಕ್ವಿಂಟಾಲ್ ನಿಗದಿ ಮಾಡಿದೆ. ಕೆಲ ದಲ್ಲಾಳಿಗಳು ರೈತರಿಂದ ಕಿಂಟ್ವಾಲ್ ಜೋಳಕ್ಕೆ 2600 ರೂ. ಕೊಳ್ಳುತ್ತಿದ್ದಾರೆ. ನಂತರ ಎಂಎಸ್‌ಪಿಯಡಿ ಬೆಳೆಯದ ರೈತರ ಜಮೀನುಗಳ ಪಹಣಿ ಪಡೆದು ಬೆಳೆ ಸಮೀಕ್ಷೆಯಲ್ಲಿ ಎಂಎಸ್‌ಪಿಯಡಿ ಬೆಳೆ ನಮೂದಿಸಿ ಖರೀದಿ ಕೇಂದ್ರದಲ್ಲಿ ಮಾರಾಟಗೊಳಿಸಿ ಲಾಭ ಪಡೆಯುತ್ತಿದ್ದಾರೆ.
ಮುಂಗಾರು ಮಿತಿ ಪೂರ್ಣ : ರಾಜ್ಯದಲ್ಲಿ ಎಂಎಸ್‌ಪಿಯಡಿ ಮುಂಗಾರಿನಲ್ಲಿ ಜೋಳ ಖರೀದಿ ಮಿತಿ 88 ಸಾವಿರ ಮೆಟ್ರಿಕ್ ಟನ್ ನಿಗದಿಗೊಳಿಸಿದ್ದು, ನೋಂದಣಿ ಆರಂಭಗೊಂಡು ಪೂರ್ಣಗೊಂಡಿದೆ. ಇನ್ನೂ ಮುಂಗಾರಿನಲ್ಲಿ ಬೆಳೆದಿರುವ ಸಾವಿರಾರು ರೈತರು ನೊಂದಣಿಗೊಂಡಿಲ್ಲ. ಕಳೆದ ಬಾರಿಗಿಂತ ಈ ಬಾರಿ ಅಧಿಕ ಇಳುವರಿ ಬಂದಿದೆ. ಫೆಬ್ರವರಿ ತಿಂಗಳಲ್ಲಿ ಹಿಂಗಾರು ಬೆಳೆ ನೊಂದಣಿ ಆರಂಭಗೊಳ್ಳಲಿದ್ದು, 2.12 ಲಕ್ಷ ಮೆಟ್ರಿಕ್ ಟನ್ ಖರೀದಿಯ ಮಿತಿ ನಿಗದಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರಿನಲ್ಲಿ 5,863 ರೈತರು ನೊಂದಾಯಿಸಿಕೊಂಡಿದ್ದು, ಕಳೆದ ಬಾರಿ 5200 ರೈತರು ನೊಂದಾಯಿಸಿಕೊಂಡಿದ್ದರು. ಅಲ್ಲದೆ, ಪ್ರಸ್ತಕ ಮೂರು ಲಕ್ಷ ಕಿಂಟ್ವಾಲ್ ಬೆಳೆಯುವ ನಿರೀಕ್ಷೆಯಿತ್ತು. ಉತ್ತಮ ಇಳುವರಿ ಬಂದಿರುವುದರಿಂದ 3.15 ಲಕ್ಷ ಕಿಂಟ್ವಾಲ್ ಬಂದಿದೆ. ಇನ್ನೂ ಸಾವಿರಾರು ನೊಂದಣಿಯಾಗದೆ ಇರುವುದರಿಂದ ರೈತರು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಕೋಟ್.. ಅಕ್ರಮ ಬೆಳೆ ಸಮೀಕ್ಷೆ ತಡೆಗಟ್ಟುವ ಉದ್ದೇಶದಿಂದ ಡ್ರೋನ್ ಮೂಲಕ ಸರ್ವೇ ಮಾಡಲು ಉದ್ದೇಶಿಸಿದೆ. ಮುಂದಿನ ವಾರದಲ್ಲಿ ಸರ್ವೇ ಪ್ರಾರಂಭವಾಗುವ ಸಾಧ್ಯತೆಯಿದೆ.
- ಸಕೀನಾ, ಉಪ ನಿರ್ದೇಶಕಿ, ಆಹಾರ ಇಲಾಖೆ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net