ಕಪ್ಪಗಲ್ ಗ್ರಾಮದಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಕಲಾವಿದರಾದ ಆದವಾನಿ ವೀಣಾ, ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಮಾಡಲಾಯಿತು. ಎಂಎಲ್ಸಿ ಸಿ.ಟಿ.ರವಿ, ಉರವಕೊಂಡ ಮಠದ ಡಾ.ಕರಿಬಸವ ರಾಜೇಂದ್ರ ಸ್ವಾಮೀಜಿ, ರಂಗತೋರಣ ಸಂಸ್ಥೆಯ ಅಧ್ಯಕ್ಷ ಪ್ರೊ.ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಸಿಎ ಎರ‌್ರಿಸ್ವಾಮಿ ಚಿಲ್ಕರಾಯಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಇತರರಿದ್ದರು.
ಬಳ್ಳಾರಿ : ನಾಟಕಗಳು ಆಯಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿದ್ದು ವರ್ತಮಾನದಲ್ಲಿ ಪ್ರಭಾವ ಬೀರುತ್ತವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆಯಿಂದ ಆಯೋಜಿಸಿದ್ದ ಕಪ್ಪಗಲ್ ನಾಟಕೋತ್ಸವದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಆದವಾನಿ ವೀಣಾ, ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಮೇಲೆ ಹರಿಶ್ಚಂದ್ರ ನಾಟಕ ಪ್ರಭಾವ ಬೀರಿತ್ತು. ವ್ಯಕ್ತಿ ಅಥವಾ ಜನಸಮುದಾಯದ ಮೇಲೆ ಪ್ರಭಾವ ಬೀರುವ ಶಕ್ತಿ ರಂಗಭೂಮಿಗಿದೆ. ನಿರಂತರ ನಾಟಕೋತ್ಸವಗಳ ಮೂಲಕ ಜನರ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತಿರುವ ರಂಗತೋರಣ ಕಾರ್ಯ ಶ್ಲಾಘನೀಯ. ಗ್ರಾಮೀಣ ಪರಿಸರದಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು. ಆಗ ಮಾತ್ರ ಸಾಂಸ್ಕೃತಿಕ ವಾತಾವರಣವನ್ನು ಎಲ್ಲೆಡೆ ಜೀವಂತವಾಗಿಡಲು ಸಾಧ್ಯವಾಗಲಿದೆ ಎಂದರು.
ಸಮಾಜದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಮಾನದಂಡಗಳಿಂದ ಅಳೆಯಲು ಸಾಧ್ಯವಿಲ್ಲ. ಹಣ, ಆಸ್ತಿ, ಅಧಿಕಾರ ಮತ್ತು ಭೌತಿಕ ಸೌಲಭ್ಯಗಳು ಕಾಲಕ್ರಮೇಣ ಕಳೆದುಹೋಗಬಹುದು. ಆರ್ಥಿಕ ಶ್ರೀಮಂತಿಕೆ ಏರಿಳಿತಗಳಿಗೆ ಒಳಗಾಗುವುದು ಸಹಜ. ಆದರೆ ಒಂದು ಸಮಾಜದ ನಿಜವಾದ ಗುರುತು ಅದರ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಮತ್ತು ಮೌಲ್ಯಗಳಲ್ಲಿ ಅಡಗಿದೆ. ಇವುಗಳೇ ಆ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಈ ಸಾಂಸ್ಕೃತಿಕ ಸಂಪತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಸಮಾಜವನ್ನು ಜೀವಂತವಾಗಿರಿಸುತ್ತದೆ ಎಂದರು.