ಕೂಡ್ಲಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ರಾಜ್ಯ ಪರಿಷತ್ತ್ ಸದಸ್ಯ ಆರ್.ಬಿ.ಬಸವರಾಜ, ಕಾರ್ಯದರ್ಶಿ ಪಾಂಡುರಂಗ, ಖಜಾಂಚಿ ಮುತ್ತುರಾಜ, ಪ್ರಮುಖರಾದ ನರೇಶ, ಪ್ರಭು ತಳವಾರ, ಟಿ.ನಾಗರಾಜ, ಶಿವಾನಂದ ಸ್ವಾಮಿ, ಮಾಳಪ್ಪ, ಪಿ.ಬಿ.ನಾಗರಾಜ, ಸವಿತಾ ಇದ್ದರು.
ಕೂಡ್ಲಿಗಿ: ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ನೌಕರರಿಗೆ ಅನಗತ್ಯ ಒತ್ತಡ ಹೇರದೆ ಮಾನಸಿಕ ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸೋಮವಾರ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ ಮಾತನಾಡಿ, ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಕಂದಾಯ ಮತ್ತು ಶಿಕ್ಷಣ ಇಲಾಖೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೌಕರರಿಗೆ ಸೂಕ್ತ ಜೀವ ಭದ್ರತೆ ಇಲ್ಲ. ಇತ್ತೀಚೆಗೆ ತಮಕೂರಿನ ಕುಣಿಗಲ್ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಆರ್.ಭುವನಾ ಅವರು ಪರಿಷ್ಕರಣೆ ಕಾರ್ಯಕ್ಕೆ ತೆರಳುವಾಗ ಅಪಘಾತದಲ್ಲಿ ಮರಣ ಹೊಂದಿದ್ದು, ನೌಕರರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ನಿರ್ದಿಷ್ಟ ಸಮಯ ಹೊರತುಪಡಿಸಿ ಇತರೆ ಸಮಯದಲ್ಲಿ ಹಾಗೂ ಭಾನುವಾರ ಸೇರಿದಂತೆ ಸಾರ್ವತ್ರಿಕ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಲಿದೆ. ಕಾರ್ಯದಲ್ಲಿ ಮಹಿಳಾ ನೌಕರರಿದ್ದು, ಯಾವುದೇ ರೀತಿಯ ಸುರಕ್ಷತೆ ಇಲ್ಲ. ಅನಾಹುತ ಸಂಭವಿಸಿದರೆ ಯಾರು ಹೊಣೆ. ಕುಟುಂಬದ ಗತಿ ಏನು. ಆದ್ದರಿಂದ ಒತ್ತಡ ರಹಿತ ಕೆಲಸ ನಿರ್ವಹಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತ್ ಸದಸ್ಯ ಆರ್.ಬಿ.ಬಸವರಾಜ, ಕಾರ್ಯದರ್ಶಿ ಪಾಂಡುರಂಗ, ಖಜಾಂಚಿ ಮುತ್ತುರಾಜ, ಪ್ರಮುಖರಾದ ನರೇಶ, ಪ್ರಭು ತಳವಾರ, ಟಿ.ನಾಗರಾಜ, ಶಿವಾನಂದ ಸ್ವಾಮಿ, ಮಾಳಪ್ಪ, ಪಿ.ಬಿ.ನಾಗರಾಜ, ಸವಿತಾ ಇತರರಿದ್ದರು.