ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ, ತಾಲೂಕು ಅಧ್ಯಕ್ಷರಾದ ಜಿ.ನಾಗಭೂಷಣ ಗೌಡ, ನೂರುದ್ದೀನ್, ಶ್ರೀನಿವಾಸರಾವ್, ಜಿ.ಬಸವನಗೌಡ ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಕಾರ್ಯದರ್ಶಿ ಶಶಿಕಾಂತ ಶಿವಪುರೆ ಇದ್ದರು.
ಬಳ್ಳಾರಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಕ್ರಿಯೆಗಳು ಸಾರ್ವಜನಿಕ ಸೇವೆ ಕೇಂದ್ರಗಳಲ್ಲಿ ಆರಂಭವಾಗಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹೀಗಾಗಿ ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ, ಸೈಬರ್ ಸೆಂಟರ್ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಅಲೆಯಬಾರದು. ಮಾರ್ಗಸೂಚಿ ಬಂದ ನಂತರ ಅಂಗನವಾಡಿ ಕಾರ್ಯಕರ್ತೆಯರೇ ನಿಮ್ಮ ಮನೆಗೆ ಬರಲಿದ್ದಾರೆ. ಈ ಕುರಿತು ಗ್ರಾಪಂ ಮಟ್ಟದಲ್ಲಿ ತಿಳುವಳಿಕೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಕೇಂದ್ರ ಕಚೇರಿ ಪಟ್ಟಿ ಪ್ರಕಾರ 5,972 ಮಂದಿ ಮರಣ ಹೊಂದಿದ ಫಲಾನುಭವಿಗಳಾಗಿದ್ದು, ಈ ಪೈಕಿ 3,748 ಜನರಿಗೆ ಯಾವುದೇ ಹಣ ಜಮೆಯಾಗಿಲ್ಲ. ಉಳಿದ 2,224 ಮೃತರ ಖಾತೆಗೆ ಜಮೆಯಾಗಿರುವ ಒಟ್ಟು 2.28 ಕೋಟಿ ರೂ. ಹಣವನ್ನು ಸರ್ಕಾರದ ನಿಯಮಾವಳಿಗಳಂತೆ ನಾಮಿನಿಗಳ ಒಪ್ಪಿಗೆ ಪಡೆದು ಮರುಪಾವತಿಗೆ ಬ್ಯಾಂಕ್‌ಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳ ಮರುಪರಿಶೀಲನೆಗಾಗಿ ಸರ್ಕಾರವು ವಿಶೇಷ ಸಮೀಕ್ಷಾ ಆ್ಯಪ್ ಸಿದ್ಧಪಡಿಸುತ್ತಿದ್ದು, ಈ ಆ್ಯಪ್ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ, ಪಡಿತರ ಚೀಟಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಸಂಖ್ಯೆ ದಾಖಲಿಸಲಿದ್ದಾರೆ. ಈ ವೇಳೆ ಫಲಾನುಭವಿ ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದನ್ನು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದರು.
ಬಾಕ್ಸ್ : ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸವಿಸ್ತರವಾಗಿ ಸಭೆ ನಡೆಸಿದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು, ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ಯಾವಾಗ ಪಾವತಿಯಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೇವಲ ಅಧಿಕಾರಿಗಳಿಗಳೊಂದಿಗೆ ಸಭೆಗೆ ಮಾತ್ರ ಸೀಮಿತವಾಯಿತು.