ಉಸ್ತುವಾರಿ ಕಚೇರಿ ಎಲ್ಲಿದೆ ?: ಜಿಲ್ಲಾ ಉಸ್ತುವಾರಿ ಸಚಿವರಿಗೆಂದು ಪ್ರತಿ ಜಿಲ್ಲೆಯಲ್ಲಿ ಕಚೇರಿ ಇರುತ್ತದೆ. ಸಚಿವರು ಇಲ್ಲದಿದ್ದರೂ ಅವರ ಸಹಾಯಕರು ಇದ್ದು, ಜನರ ಸಮಸ್ಯೆ ಆಲಿಸುವುದು, ಮನವಿ ಪತ್ರ ಸ್ವೀಕರಿಸುವ ಕೆಲಸ ಮಾಡುತ್ತಿರುತ್ತಾರೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಸಚಿವರ ಕಚೇರಿ ಎಲ್ಲಿದೆ ಎಂಬುದನ್ನು ಹುಡುಕಬೇಕು. ಹುಡುಕಿದರೂ ಸಿಗುವುದಿಲ್ಲ. ಏಕೆಂದರೆ ಕಚೇರಿಯನ್ನೇ ತೆರೆದಿಲ್ಲ. ಜನತಾ ದರ್ಶನವಂತೂ ನಿಂತೇ ಹೋಗಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ 2025ರ ಸೆ.29ರಂದು ಕೆಡಿಪಿ ಹಾಗೂ ಜನತಾ ದರ್ಶನ ನಡೆದಿತ್ತು. ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ತಾಂಡಾವಾಡುತ್ತಿವೆ. ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳು ಶಿಥಿಲ ವ್ಯವಸ್ಥೆಗೆ ತಲುಪಿವೆ. ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಕಾಯಂ ನೌಕರರಿಲ್ಲ. ಕೆಲ ಇಲಾಖೆಗಳಲ್ಲಿ ಅಧಿಕಾರಿಗಳೇ ಆಡಿದ್ದೇ ಆಟ ಎಂಬಂತೆಯಾಗಿದೆ. ಸರ್ಕಾರಿ ಬಸ್‌ಗಳು ಗುಜುರಿಗೆ ತಲುಪಿದರೂ ಹಾಗೇ ಸಂಚರಿಸುವುದರಿಂದ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಬೇಸಿಗೆ ಹಿನ್ನೆಲೆ ಸರ್ಕಾರಿ ಕಚೇರಿ ಸಮಯ ಬದಲಾವಣೆಗೊಳಿಸಿದ ಪರಿಣಾಮ ಬಹುತೇಕ ಇಲಾಖೆಗಳಲ್ಲಿ ನಿಗದಿತ ವೇಳೆ ಅಧಿಕಾರಿಗಳು ಹಾಜರಿಲ್ಲ. ನಗರ, ಗ್ರಾಮೀಣ ರಸ್ತೆಗಳು ಕಿತ್ತು ಹೋಗಿವೆ. ರೈತರ ಸಮಸ್ಯೆಯನ್ನು ಯಾರೂ ಕೇಳುವವರಿಲ್ಲ. ಮಹಾನಗರ ಪಾಲಿಕೆಯ ಮೇಯರ್ ಹಾಗೂ ಸ್ವ ಪಕ್ಷದ ಆಡಳಿತ ಸದಸ್ಯರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರ ಹಾಗೂ ದಲ್ಲಾಳಿಗಳ ಕಿತ್ತಾಟದಿಂದ ರೈತರು ಧಾನ್ಯ ಮಾರಲು ಹರಸಾಹಸ ಪಡಬೇಕು. ಇನ್ನೂ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದಿದೆ. ಕೆಐಎಡಿಬಿ ಕಚೇರಿಯಲ್ಲಿ ನೌಕರನಿಂದಲೇ ಬಹುಕೋಟಿ ವಂಚನೆ, ಆರಂಭವಾಗದ ಜೀನ್ಸ್ ಅಪೆರಲ್ ಪಾರ್ಕ್, ಜೀನ್ಸ್ ಉದ್ಯಮ ಕುಸಿತ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿವೆ. ಆದರೆ, ಉಸ್ತುವಾರಿ ಸಚಿವರಿಗೆ ಮಾತ್ರ ಕೇರಳ ಹಾಗೂ ರಾಜ್ಯದಲ್ಲಿ ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.