ಸಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಿ

ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಎಸ್.ಬೀಳಗಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆ ನಡೆಯಿತು.
ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಎಸ್.ಬೀಳಗಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆ ನಡೆಯಿತು.
Published on
ಕುರುಗೋಡು: ಇತ್ತೀಚಿಗೆ ಸಿರಗುಪ್ಪ ತಹಸಿಲ್ ಕಚೇರಿ ಸಿಬ್ಬಂದಿ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ. ತಾಲೂಕಿನಲ್ಲಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದರೆ ಅದೇ ರೀತಿ ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಎಸ್.ಬೀಳಗಿ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಶನಿವಾರ ಮಾತನಾಡಿದರು. ಕಚೇರಿಗೆ ಭೇಟಿ ನೀಡುವ ಜನರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ. ಸಕಾಲಕ್ಕೆ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸರ್ವೇ ನಂ. 402 ರ ಪೈಕಿ 1.50 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಮ್ಮ ತಂದೆ ಮಾಯಪ್ಪಗೆ 1991-92ರಲ್ಲಿ ಸರ್ಕಾರ ಪಟ್ಟ ನೀಡಿದೆ. ಈಗ ನಮ್ಮ ಜಮೀನಲ್ಲಿ ಏಕಲವ್ಯ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು ಎಂದು ರೈತ ರುದ್ರಪ್ಪ ಅಳಲು ತೋಡಿಕೊಂಡರು.
ರೈತ ಮಹಿಳೆ ಹಿಮಾಬಿಂದು ಮಾತನಾಡಿ, ಲಕ್ಷ್ಮೀಪುರ ಗ್ರಾಮದಲ್ಲಿ ನಮ್ಮ ಹೆಸರಿನಲ್ಲಿ ಮೂರು ಎಕರೆ ಜಮೀನು ಪಟ್ಟ ಇದೆ. ಕಳೆದ 11 ವರ್ಷದಿಂದ ಭೂಮಾಪನ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ನಮ್ಮ ಭೂಮಿ ಎಲ್ಲಿದೆ ಎಂದು ತೋರಿಸುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ದೂರಿದರು. ಈ ಸಮಸ್ಯೆ ಪರಿಹರಿಸುವಂತೆ ಗ್ರಾಮ ಆಡಳಿತಾಧಿಕಾರಿ ರಮೇಶ್‌ಗೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.
ಪುರಸಭೆಯಲ್ಲಿ ಫಾರ್ಮ್ 3, ಮರಣ ಮತ್ತು ಜನನ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಹಣ ವಸೂಲಿ ಮಾಡುವ ಕುರಿತು ಸಾರ್ವಜನಿಕರು ದೂರು ನೀಡಿದರು. ಈ ರೀತಿ ದೂರುಗಳು ಮರುಕಳಿಸಿದರೆ ಕ್ರಮವಹಿಸುವುದಾಗಿ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net