ಕಂಪ್ಲಿ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬಾರದು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ಐ.ಹೊನ್ನೂರಸಾಬ್ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತತದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾರ್ಮಿಕ ವಿಷಯ ಕೇಂದ್ರ ಸರ್ಕಾರದ ಸಮವರ್ತಿ ಪಟ್ಟಿಯಲ್ಲಿದ್ದು, ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಬಾರದು. 2025ರ ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ ಕಾರ್ಮಿಕರು ಕಲ್ಯಾಣ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.
ರಾಜ್ಯ ಗ್ರಾಪಂ.ನೌಕರರ ಸಂಘದ ಸಹ ಕಾರ್ಯದರ್ಶಿ ನೆಲ್ಲೂಡಿ ರಾಜಾ ಮಾತನಾಡಿ, ಗ್ರಾಪಂ.ನೌಕರರನ್ನು ಕಾಯಂಗೊಳಿಸಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರ ಮಾಸಿಕ 36 ಸಾವಿರ ರೂ. ವೇತನ ನೀಡಬೇಕು. ವಿಬಿ ಜಿ ರಾಮ್ ಜಿ ಬದಲಿಗೆ ಮೊದಲಿನಂತೆ ನರೇಗಾ ಮುಂದುವರಿಸಬೇಕು. ಕೇಂದ್ರ ಸರ್ಕಾರದ ಶ್ರಮಶಕ್ತಿ ನೀತಿಯನ್ನು ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಬಂಡಿ ಬಸವರಾಜ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ.ಜಡೆಯ್ಯಸ್ವಾಮಿ, ಪದಾಧಿಕಾರಿಗಳಾದ ಚಾಂದ್ ಬಾಷ, ಚಂದ್ರಶೇಖರಗೌಡ, ಅಂಗನವಾಡಿ ಕಾರ್ಯಕರ್ತೆಯರಾದ ಶಾರದಮ್ಮ, ತಿಪ್ಪಮ್ಮ, ಶಾಂತಮ್ಮ, ಕಾರ್ಮಿಕರಿದ್ದರು.