ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಸಚಿವ ಬಿ.ನಾಗೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ, ಪದಾಧಿಕಾರಿಗಳಾದ ಜಾಲಿಹಾಳ್ ಶ್ರೀಧರ್, ವೀರಭದ್ರ ನಾಯಕ, ಶಿವಯ್ಯ ಇತರರಿದ್ದರು.
ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿರುವ ಹಿನ್ನಲೆ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ತಾಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ತುಂಗಭದ್ರಾ ರೈತ ಸಂಘದಿಂದ ಸಚಿವ ಬಿ.ನಾಗೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಜಿ.ಪುರುಷೋತ್ತಮಗೌಡ ಮಾತನಾಡಿ, ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 65 ಟಿಎಂಸಿ ನೀರು ಸಂಗ್ರಹವಾಗಿದ್ದು, ನಿತ್ಯ 50 ಸಾವಿರ ಕ್ಯೂಸೆಕ್ಸ್ ಒಳಹರಿವು ದಾಖಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದಿಂದ ದಿನಕ್ಕೆ 35 ರಿಂದ 40 ಸಾವಿರ ಕ್ಯೂಸೆಕ್ಸ್ ನೀರು ನದಿಯ ಮೂಲಕ ತುಂಗಭದ್ರ ಜಲಾಶಯಕ್ಕೆ ಹರಿದುಬರುತ್ತಿದೆ.
ಆ.10ರ ವೇಳೆಗೆ ಜಲಾಶಯದ ನೀರು ಸಂಗ್ರಹ ಮಟ್ಟ 75 ರಿಂದ 78 ಟಿಎಂಸಿ ತಲುಪುವ ನಿರೀಕ್ಷೆಯಿದೆ. ಜಲಾಶಯದ ಕ್ರಸ್ಟ್ ಗೇಟ್‌ಗಳ ದುರಸ್ತಿ ಮತ್ತು ಅಳವಡಿಕೆ ಕೆಲಸಗಳಿಂದಾಗಿ ಈ ಬಾರಿ ಬೇಸಿಗೆ ಬೆಳೆಗೆ ನೀರು ನೀಡಿರಲಿಲ್ಲ. ಪ್ರಸ್ತುತ ರೈತರು ಭತ್ತ ಹಾಗೂ ಮೆಣಸಿನಕಾಯಿ ಸಸಿಗಳನ್ನು ನೆಟ್ಟು ಎರಡು ತಿಂಗಳು ಕಳೆದಿದ್ದು, ಬೆಳೆಗಳ ರಕ್ಷಣೆಗೆ ತಕ್ಷಣ ನೀರಿನ ಅಗತ್ಯವಿದೆ. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.