ಬಳ್ಳಾರಿ : ಕೇಂದ್ರ ಸರ್ಕಾರ ಜಾರಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ, ನಗರದ ತಾಪಂ ಕಚೇರಿ ಮುಂಭಾಗದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ಯಥಾಸ್ಥಿತಿಯಂತೆ ಮನರೇಗಾ ಯೋಜನೆ ಜಾರಿಗೊಳಿಸಬೇಕು. ವಿಬಿ ಜಿ ರಾಮ್ ಜಿ ಕಾಯ್ದೆಯು ಸಂಪೂರ್ಣವಾಗಿ ಬಡ ಕೂಲಿ ಕಾರ್ಮಿಕರಿಂದ ಉದ್ಯೋಗ ಕಸೆಯುವ ಕಾಯ್ದೆಯಾಗಿದೆ. ಕೆಲಸ ನೀಡುವಲ್ಲಿ ಈ ಮೊದಲು ಗ್ರಾಪಂಗೆ ಇದ್ದ ಅಧಿಕಾರ ರದ್ದು ಮಾಡಲಾಗಿದೆ.
ಇನ್ನೂ ಮುಂದೆ ಈ ಕಾರ್ಯದಲ್ಲಿ ಗುತ್ತಿಗೆದಾರರ ಪ್ರವೇಶ ಮಾಡಲು ಯೋಜನೆ ರೂಪಿಸಲಾಗಿದ್ದು, ಇದೊಂದು ದೊಡ್ಡ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು. ಹಾಗಯೇ ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕದೆ, ತಾವುಗಳು ಸಹ ರಾಜ್ಯದ ಜನರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.