ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ನಿಯೋಗವು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಲಯದ ಜನರಲ್ ಮ್ಯಾನೇಜರ್ ಪದ್ಮನಾಭ ಅನಂತ್ ಅವರಿಗೆ ಮನವಿ ಸಲ್ಲಿಸಿತು. ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ, ಪದಾಧಿಕಾರಿಗಳಾದ ಗುರು ಕಲ್ಮಠ, ಪಿ. ಬಂಡೆಗೌಡ, ಜಿ.ಎಂ. ಮಂಜುನಾಥ್, ಮಹೇಶ್‌ಗೌಡ, ಮಧುಸೂದನ್ ಗೌಡ, ವಿರುಪಾಕ್ಷಪ್ಪ , ಹೊಸಪೇಟೆ ಸತೀಶ್ ಇದ್ದರು.
ಬಳ್ಳಾರಿ : ಬಳ್ಳಾರಿ-ಸಿರಗುಪ್ಪ-ಸಿಂಧನೂರು ನೂತನ ರೈಲು ಮಾರ್ಗ ಕಾಮಗಾರಿ ತಕ್ಷಣವೇ ಆರಂಭ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ನಿಯೋಗವು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳ್ಳಾರಿ -ಸಿರಗುಪ್ಪ - ಸಿಂಧನೂರು - ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ಸರ್ವೆ ಆದೇಶ 2013ರಲ್ಲೇ ಆಗಿತ್ತು. ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದರು. ತದನಂತರ ಬಂದ ಬಿಜೆಪಿ ಸರ್ಕಾರದ ಸಚಿವ ಡಿ.ವಿ. ಸದಾನಂದ ಗೌಡ ಅವರು, ಬಳ್ಳಾರಿ-ಸಿಂಧನೂರು-ಗಬ್ಬೂರು ಮಾರ್ಗದ ಸರ್ವೇ ಆದೇಶ ನೀಡಿದ್ದರು. ಎರಡೂ ಸರ್ವೆಗಳು ಪೂರ್ಣಗೊಂಡಿದ್ದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ತಕ್ಷಣವೇ ಕಾಮಗಾರಿ ಪ್ರಾರಂಬಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಬಳ್ಳಾರಿಯಿಂದ ಬೆಂಗಳೂರಿಗೆ ಬೆಳಗ್ಗೆ ವೇಳೆಯಲ್ಲಿ ಸಂಚರಿಸಲು ಇಂಟರ್‌ಸಿಟಿ, ಜನಶತಬ್ದಿ ಅಥವಾ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಬೇಕು. ಇದು ಕಳೆದ 20 ವರ್ಷಗಳ ಸುದೀರ್ಘ ಬೇಡಿಕೆಯಾಗಿದೆ. ಹೊಸಪೇಟೆ-ಮುಂಬೈ ರೈಲಿಗೆ ಸಂಪರ್ಕ ಕಲ್ಪಿಸಲು ಬಳ್ಳಾರಿಯಿಂದ ಬೆಳಗ್ಗೆ 11:30ಕ್ಕೆ ನೂತನ ರೈಲು ಸೌಲಭ್ಯ ಒದಗಿಸಬೇಕು. ಶಿವಮೊಗ್ಗ - ಬಳ್ಳಾರಿ -ಚೆನ್ನೈ - ದ್ವಿ-ವಾರದ (ಬೈ-ವೀಕ್ಲಿ) ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸಬೇಕು. ಬೆಳಗಾವಿ - ಮಣುಗೂರು ಎಕ್ಸ್‌ಪ್ರೆಸ್ ರೈಲನ್ನು ದಿನನಿತ್ಯದ ಸೇವೆಯಾಗಿ ಮೇಲ್ದರ್ಜೆಗೇರಿಸಬೇಕು. ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸದ್ಯ ಇರುವ ಒಂಬತ್ತು ಸ್ಲೀಪರ್ ಬೋಗಿಗಳ ಬದಲಿಗೆ ಈ ಹಿಂದಿನಂತೆ 12 ಸ್ಲೀಪರ್ ಬೋಗಿಗಳನ್ನು ಅಳವಡಿಸಬೇಕು. ಬಳ್ಳಾರಿಯ ಹೊಸ ಬಸ್ ನಿಲ್ದಾಣ ಹಿಂಭಾಗದಲ್ಲಿ ’ಬಳ್ಳಾರಿ ಬೈಪಾಸ್ ರೈಲ್ವೆ ನಿಲ್ದಾಣ’ವನ್ನು ನೂತನವಾಗಿ ಸ್ಥಾಪಿಸಬೇಕು ಎಂಬುದಾಗಿ ಆಗ್ರಹಿಸಿತು.