ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಡಿಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಪರಮೇಶ, ತಹಸೀಲ್ದಾರ್ ವಿನಾಯಕಗೌಡ, ಗೃಹರಕ್ಷಕ ದಳದ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಡಿಡಿ ಮಹಾಂತೇಶ್ ಕಂಚಿನಮಠ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಇದ್ದರು.
ಬಳ್ಳಾರಿ : ಕಡಿಮೆ ಸಮಯದಲ್ಲಿ, ಕನಿಷ್ಠ ನಷ್ಟದೊಂದಿಗೆ ಸಾರ್ವಜನಿಕರನ್ನು ರಕ್ಷಿಸುವುದು ಅಣಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಗೃಹರಕ್ಷದ ದಳದ ಡಿಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಅಮರಾಪುರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇವರ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆ ಕುರಿತು ಬುಧವಾರ ಆಯೋಜಿಸಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಖಾನೆಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬೆಂಕಿ ಅವಘಡ ಎದುರಿಸಲು, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವನ್ನು ತಡೆಯಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಲು ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಅಗತ್ಯವಿದೆ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ವೈ.ಶೇಕ್ ಸಾಬ್ ಮಾತನಾಡಿ, ಇತ್ತೀಚಿನ ಜಾಗತಿಕ ವಿದ್ಯಮಾನಗಳಾದ ಉಕ್ರೇನ್, ಇರಾನ್ ಮತ್ತು ಇಸ್ರೇಲ್ ದೇಶಗಳಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದಾಗ, ಅಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ಮಾಕ್ ಡ್ರಿಲ್‌ಗಳ ಮಹತ್ವ ಏನೆಂಬುದು ನಮಗೆ ಅರಿವಾಗುತ್ತದೆ. ಇದು ಕೇವಲ ಒಂದು ತಾಲೀಮು ಅಲ್ಲ, ದೇಶದ ರಕ್ಷಣೆ ಮತ್ತು ಭವಿಷ್ಯಕ್ಕೆ ಭದ್ರವಾದ ಅಡಿಪಾಯವಾಗಿದೆ ಎಂದರು.
ಪ್ರಕೃತಿ ವಿಕೋಪಗಳಾದ ಭೂಕಂಪ, ನೆರೆಹಾವಳಿಗಳಂತಹ ನೈಸರ್ಗಿಕ ವಿಕೋಪಗಳು ಒಂದು ಕಡೆಯಾದರೆ, ಯುದ್ಧದಂತಹ ಮಾನವ ನಿರ್ಮಿತ ಆಪತ್ತುಗಳು ಎದುರಾದಾಗ ಇಂತಹ ಸಣ್ಣಪುಟ್ಟ ಮಾಕ್ ಡ್ರಿಲ್‌ಗಳು ನಮ್ಮ ಜೀವ ರಕ್ಷಣೆಗೆ ಧಾವಿಸುತ್ತವೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಂಟಿಯಾಗಿ ಹಮ್ಮಿಕೊಂಡಿದ್ದ ವಿವಿಧ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.