ಕಾನಹೊಸಹಳ್ಳಿ ಸಮೀಪದ ತಿಪ್ಪೆಹಳ್ಳಿ ಬಳಿ ಚಿನ್ನಹಗರಿ ನದಿ ದಂಡೆಯಲ್ಲಿ ಆಯೋಜಿಸಿದ್ದ ಚಿನ್ನಹಗರಿ ಉತ್ಸವದ ಕಾರ್ಯಕ್ರಮವನ್ನು ಮ್ಯಾಸನಾಯಕ ಬುಡಕಟ್ಟು ಗುಡಿಕಟ್ಟೆಯ ಪೂಜಾರಿ, ಕಿಲಾರಿಗಳು ಉದ್ಘಾಟಿಸಿದರು. ಹಂಪಿ ಕನ್ನಡ ವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸಂಶೋಧಕರಾದ ಜೋಗೇಶ್, ಓರಾಮ್, ವೃಂದಾ ಇತರರಿದ್ದರು.
ಕಾನಹೊಸಹಳ್ಳಿ: ಮೂರು ಜಿಲ್ಲೆಯಗಳ ಗಡಿಭಾಗದಲ್ಲಿ ಹರಿಯುವ ಚಿನ್ನಹಗರಿ ಉಪನದಿಯು ಪ್ರಾಚೀನ ಕಾಲದಿಂದ ಮತ್ತು ತಳ ಸಮುದಾಯಗಳ ಪಾಲಿಗೆ ಸಾಂಸ್ಕೃತಿಕ ಸಿರಿವಂತಿಕೆ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹಂಪಿ ವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಹೇಳಿದರು.
ಸಮೀಪದ ತಿಪ್ಪೆಹಳ್ಳಿ ಬಳಿ ಚಿನ್ನಹಗರಿ ನದಿ ದಂಡೆಯಲ್ಲಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಮತ್ತು ಚಿನ್ನಹಗರಿ ಪ್ರಕಾಶನ ಹಾಗೂ ಗಾದ್ರಿ ಪಾಲನಾಯಕ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಚಿನ್ನಹಗರಿ ಉತ್ಸವದಲ್ಲಿ ಮಾತನಾಡಿದರು.
ನದಿ ಪಾತ್ರದಲ್ಲಿ ವಾಸಿಸುವ ಬೇಡ ಬುಡಕಟ್ಟು ಜನರ ಪಾಲಿಗೆ ನದಿ ಪೂಜ್ಯನೀಯ ಸ್ಥಳವಾಗಿದ್ದು, ಪ್ರಾಚೀನ ಸಂಸ್ಕೃತಿ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಬೇಕು. ಕಳೆದ 35-40 ವರ್ಷಗಳಿಂದ ನದಿಯಲ್ಲಿ ನೀರಿಲ್ಲದೆ ಬತ್ತಿಹೋಗಿತ್ತು.
3 ವರ್ಷದಿಂದ ಉತ್ತಮ ಮಳೆಯಾಗಿ ನದಿಯಲ್ಲಿ ನೀರು ಹರಿಯುವುದರಿಂದ ಮರುಜೀವ ಪಡೆದುಕೊಂಡಿರುವುದು ಈ ಭಾಗದಲ್ಲಿ ಜನರ ಪಾಲಿಗೆ ಸಂತಸ ತಂದಿದೆ. ಅಲ್ಲದೆ, ಕಳೆದ ಎರಡು ವರ್ಷಗಳು ಚಿನ್ನಹಗರಿ ಉತ್ಸವ ಆಚರಣೆ ಮೂಲಕ ಗತನೆನಪು ಮೇಳೈಸಿದೆ ಎಂದರು. ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು.
ವಿಚಾರ ಸಂಕೀರಣ: ಚಿನ್ನಹಗರಿ ನದಿಯ ಇತಿಹಾಸ, ಸಂಸ್ಕೃತಿ ಪರಂಪರೆ ಕುರಿತು ಸಂಶೋಧಕರಾದ ಗುಜರಾತಿನ ಕು.ವೃಂದಾ, ಜಾರ್ಖಂಡ ಓರಾಮ್, ಅದಿವಾಸಿ ಸಮುದಾಯದ ಸಂಶೋಧಕಿ ಶ್ವೇತಾ ವಿಚಾರ ಸಂಕೀರಣದಲ್ಲಿ ಪ್ರಬಂಧ ಮಂಡಿಸಿದರು.
ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು, ಕೂಡ್ಲಿಗಿ ತಾಲೂಕಿನ ಬೇಡ ಬುಡಕಟ್ಟಿನ ಹಿರಿಯ ದಾಸಯ್ಯಗಳು, ಪೂಜಾರಿಗಳು, ಕಿಲಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು.