ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಓದು ವಿಶೇಷ ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಪುಸ್ತಕ ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಿವಿ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಜಿ.ಪ್ರಹ್ಲಾದ್ ಚೌದ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಪ್ರಾಧ್ಯಾಪಕರಾದ ಡಾ. ದಸ್ತಗೀರಸಾಬ್ ದಿನ್ನಿ, ಬಸವರಾಜ್, ದುರ್ಗಾ ಪ್ರಸಾದ್ ಇತರರಿದ್ದರು.
ಡಾ.ಬಿ. ಆರ್.ಅಂಬೇಡ್ಕರ್ ಅವರ ಆಶಯ ನಿಜವಾಗಬೇಕಾದರೆ ಘೋಷಣೆಗೆ ಸೀಮಿತವಾಗದೆ, ಜ್ಞಾನ, ಅರಿವು ಮತ್ತು ಸಮಾಜಮುಖಿ ಕರ್ತವ್ಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕೆಂದು ಎಂದು ವಿಎಸ್‌ಕೆ ವಿವಿ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಕರೆ ನೀಡಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಹಾಗೂ ಸಾಧನೆಗಳ ಪರಿಚಯದ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಓದು ವಿಶೇಷ ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಪುಸ್ತಕ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಇತಿಹಾಸದಲ್ಲೇ ಅಂಬೇಡ್ಕರ್ ಅವರಷ್ಟು ಅಪಾರವಾಗಿ ಅಧ್ಯಯನ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಕಾಣುವುದು ಕಷ್ಟಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಜ್ಞಾನಾರ್ಜನೆ ಮಾಡಿ, ನಿರಂತರ ಕಷ್ಟ ಮತ್ತು ನೋವುಗಳ ನಡುವೆಯೂ ಈ ದೇಶಕ್ಕೆ ದಾರಿದೀಪವಾದ ಆಧುನಿಕ ಜ್ಞಾನಿ. ತಮ್ಮ ಮೂಲ ಹೆಸರಿನ ಬದಲಿಗೆ ಗುರುವಿನ ಹೆಸರನ್ನೇ ಉಳಿಸಿಕೊಂಡು ಬೆಳೆಸಿದ ಅಂಬೇಡ್ಕರ್ ಅವರಂತೆ ನಾವೂ ನಮ್ಮ ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ, ಮೊದಲು ಉತ್ತಮ ನಾಗರಿಕರಾಗಬೇಕು ಮತ್ತು ಸಂಸ್ಕಾರಯುತ ಕುಟುಂಬ ಮುನ್ನಡೆಸುವ ನಾಯಕರಾಗಬೇಕು. ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ಜಿ.ಪ್ರಹ್ಲಾದ್ ಚೌದ್ರಿ ಮಾತನಾಡಿ, ವೈವಿಧ್ಯಮಯ ಧರ್ಮ ಮತ್ತು ಸಂಸ್ಕೃತಿ ಹೊಂದಿರುವ ಭಾರತ ದೇಶಕ್ಕೆ ಸಂವಿಧಾನವೇ ಅತ್ಯಂತ ಶ್ರೇಷ್ಠವಾದ ಗ್ರಂಥವಾಗಿದ್ದು, ದೇಶದ ಏಕತೆ ಮತ್ತು ಸಮಾನತೆಗೆ ಅಂಬೇಡ್ಕರ್ ರಚಿತ ಸಂವಿಧಾನವೇ ಮುಖ್ಯ ಆಧಾರ ಎಂದು ಹೇಳಿದರು.
ಪ್ರೊ.ಆಲಂಭಾಷಾ ಮಾತನಾಡಿ, ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅವರನ್ನು ಜಾತಿಯ ಸಂಕೋಲೆಯಿಂದ ಅಳೆಯುವುದು ತಪ್ಪು. ಜಾತಿ ಎಂಬ ಸಂಕುಚಿತ ಭಾವನೆಯನ್ನು ತೊರೆದು ನೀತಿಯ ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಬಳಿಕ ಪ್ರಬಂಧ ಸ್ಪರ್ಧೆಯಲ್ಲಿ ನಂದಿನಿ (ಪ್ರಥಮ), ಎನ್.ನಂದಿನಿ (ದ್ವಿತೀಯ), ಜಿ.ವಿಜಯಕುಮಾರ್(ತೃತೀಯ), ವೈ.ಸುನಿತಾ ಹಾಗೂ ರೂಪಾ(ಸಮಾಧಾನಕರ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನದ ಪ್ರಸ್ತಾವನೆ ಬೋಧಿಸಲಾಯಿತು.