ಮಹಾನಗರ ಪಾಲಿಕೆಯಲ್ಲಿ ಕೋಟ್ಯಾಂತರ ಅನುದಾನವಿದ್ದರೂ ಬಳಕೆಯಾಗಿಲ್ಲ

ಬಳ್ಳಾರಿಯ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಸಚಿವ ಬೈರತಿ ಸುರೇಶ್ ಮಾತನಾಡಿದರು. ಸಂಸದ ಈ.ತುಕಾರಾಮ್, ಶಾಸಕರಾದ ಬಿ.ನಾಗೇಂದ್ರ, ನಾರಾಭರತರೆಡ್ಡಿ, ಮೇಯರ್ ಪಿ.ಗಾದೆಪ್ಪ, ಡಿಸಿ ನಾಗೇಂದ್ರ ಪ್ರಸಾದ್ ಕೆ., ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು  ಇದ್ದರು.
ಬಳ್ಳಾರಿಯ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿದರು. ಸಂಸದ ಈ.ತುಕಾರಾಮ್, ಶಾಸಕರಾದ ಬಿ.ನಾಗೇಂದ್ರ, ನಾರಾಭರತರೆಡ್ಡಿ, ಮೇಯರ್ ಪಿ.ಗಾದೆಪ್ಪ, ಡಿಸಿ ನಾಗೇಂದ್ರ ಪ್ರಸಾದ್ ಕೆ., ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾನಗರ ಪಾಲಿಕೆ
  • ಇಂದಿರಾ ಕ್ಯಾಂಟೀನ್‌
  • ನಗರಾಭಿವೃದ್ಧಿ ಇಲಾಖೆ

ಬಳ್ಳಾರಿ :  ಇಲ್ಲಿನ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಳೆದ ಆಗಸ್ಟ್ ತಿಂಗಳಲ್ಲಿ 14.57 ಕೋಟಿ ರೂ. ವೆಚ್ಚದ ನಗರದ 134 ಕಾಮಗಾರಿ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ಈವರೆಗೆ ವರ್ಕ್ ಆರ್ಡ್‌ರ್ ನೀಡಲು ವಿಳಂಬ ಏಕೆ ?. ಇನ್ನೂ ಹತ್ತು ದಿನದೊಳಗೆ ಆದೇಶ ನೀಡದಿದ್ದರೆ ಸಂಬಂಧಪಟ್ಟ ಇಂಜಿಯರ್‌ಗಳ ಮೇಲೆ ಕ್ರಮವಹಿಸಿ ಎಂಬುದಾಗಿ ಡಿಸಿ ಅವರಿಗೆ ಸಚಿವರು ತಾಕೀತು ಮಾಡಿದರು.

ರಾಜ್ಯದ ಪಾಲಿಕೆಗಳ ಪೈಕಿ ಬಳ್ಳಾರಿ ಮಹಾನಗರ ಶ್ರೀಮಂತ ಪಾಲಿಕೆಯಾಗಿದ್ದು, ಪ್ರತಿವರ್ಷ ತೆರಿಗೆ ಹೆಚ್ಚಿಸಿ, ಅಧಿಕಾರಿಗಳು ಸಂಗ್ರಹಣೆ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ವಿನಿಯೋಗಿಸಬೇಕು. ರಾಜ್ಯದಲ್ಲಿ ಅನಧಿಕೃತ ಕಟ್ಟಡ, ಬಡಾವಣೆಗಳ ಅಧಿಕೃತವಾಗಿಸಲು ಇ-ಖಾತಾ ಅಭಿಯಾನ ಆರಂಭಿಸಿದ್ದು, ವರ್ಷಕ್ಕಿಂತ ವರ್ಷ ತೆರಿಗೆ ಆದಾಯ ಹೆಚ್ಚಳಗೊಳ್ಳಬೇಕು. ಮಹಾನಗರ ಪಾಲಿಕೆಯ ವಾರ್ಷಿಕವಾರು ತೆರಿಗೆ ನಿಗದಿತ ಗುರಿ ತಲುಪುತ್ತಿದೆಯೇ? ನಗರದಲ್ಲಿ ಮನೆಗಳಿಗಿಂತ ವ್ಯಾಪಾರಕ್ಕಾಗಿ ಪರವಾನಿಗೆ ಪಡೆದ ವಾಣಿಜ್ಯ ಮಳಿಗೆಗಳ ತೆರಿಗೆ ಕಡ್ಡಾಯವಾಗಿ ಪಾವತಿಸುವಂತೆ ಸೂಚಿಸಬೇಕು. ಇಲ್ಲದಿದ್ದಲ್ಲಿ ಬಡ್ಡಿ, ಚಕ್ರಬಡ್ಡಿ ಒಳಗೊಂಡು ಪಾವತಿಸಲು ಎಚ್ಚರಿಸಬೇಕು ಎಂದರು.
ಪಾಲಿಕೆಯ ಒಡೆತನದ ಜಾಗಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಹಲವು ಜಾಗಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಅಲ್ಲಿ ನಮ್ಮ ಪರ ನಿಷ್ಠಾವಂತ ಮತ್ತು ನಿಪುಣ ವಕೀಲರನ್ನು ನಿಯೋಜಿಸಬೇಕು. ಇದರಿಂದ ಸರ್ಕಾರಿ ಸ್ಥಳಗಳು ಪಾಲಿಕೆ ವಶದಲ್ಲಿ ಇರಲಿವೆ ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದರು.
ಪಾಲಿಕೆಯಲ್ಲಿ ಒಟ್ಟು 313 ಹುದ್ದೆಗಳು ಮಂಜೂರು ಪೈಕಿ ಕೇವಲ 94 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು. ಇನ್ನೂ 223 ಹುದ್ದೆಗಳ ಖಾಲಿಯಿರುವ ಮಾಹಿತಿಯಿದೆ. ಇದರ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರ ಅಧೀನ ಕಾರ್ಯದರ್ಶಿ ಜತೆ ಚರ್ಚಿಸಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ಕಸ ಗೂಡಿಸುವ, ಜೆಟ್ಟಿಂಗ್ ಯಂತ್ರ ಇದೆಯೇ? ಎಂದು ಸಚಿವರು ಪ್ರಶ್ನಿಸಿದರು. ಪಾಲಿಕೆ ಸದಸ್ಯರು ಹಳೆಯ ಮಾದರಿಯ ಯಂತ್ರಗಳಿದ್ದು, ಅವು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಭೆಗೆ ಪ್ರಸ್ತಾಪಿಸಿದಾಗ, ಸಿಎಸ್‌ಆರ್ ಅನುದಾನದಡಿ ಆಧುನಿಕ ಯಂತ್ರಗಳನ್ನು ಖರೀದಿಸಿ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದು ಡಿಸಿ ನಾಗೇಂದ್ರ ಪ್ರಸಾದ್ ಸಭೆಯಲ್ಲಿ ಉತ್ತರಿಸಿದರು. 
ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಅವುಗಳನ್ನು ಹಿಡಿದು ಒಂದು ಜಾಗದಲ್ಲಿ ಸಂರಕ್ಷಿಸಬೇಕಿದೆ. ಅದಕ್ಕಾಗಿ ಡಿಸಿ ಸ್ಥಳ ಗುರುತಿಸಿದ್ದಾರೆ. ಈ ಕುರಿತು ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಿ, ಅದೇರೀತಿಯಾಗಿ ಬಿಡಾಡಿ ದನಗಳನ್ನು ಸಹ ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂದರು. 
ನಗರದ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವಂತಿಲ್ಲ, ಯಾವುದೇ ಕ್ಯಾಂಟೀನ್‌ಗಳು ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಇದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥಪಡಿಸಬೇಕು. ಅಲ್ಲದೆ, ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಲೇಔಟ್‌ಗಳನ್ನು ಕೂಡಲೇ ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಕ್ರಮವಹಿಸಬೇಕು. ವಿವಿಧ ಲೇಔಟ್‌ಗಳ ಅಭಿವೃದ್ಧಿಗೆ ರೈತರ ಭೂಮಿ ಸ್ವಾಧೀನ ಹಾಗೂ ಇತರೆ ತೊಡಕುಗಳಿದ್ದಲ್ಲಿ ಸಂಬಂಧಿಸಿದ ಶಾಸಕರೊಂದಿಗೆ ಚರ್ಚಿಸಿ ಭೂಮಾಲೀಕರ ಮನವೊಲಿಸುವ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.
ಬಾಕ್ಸ್  : ಇಲ್ಲಿನ ಡಿಸಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಆರಂಭದಿಂದ ಕೊನೆಯವರೆಗೆ ಶಾಸಕ ಬಿ.ನಾಗೇಂದ್ರ ಅವರನ್ನು ಸಚಿವ ಬೈರತಿ ಸುರೇಶ್ ಮಾಮ್, ಮಾಮ್ ಎಂಬುದಾಗಿ ಸಂಭೋದಿಸುವುದು ಕಂಡುಬಂತು. ಇದಕ್ಕೆ ಪ್ರತಿಯಾಗಿ ಕೆಲ ಬಾರಿ ನಾಗೇಂದ್ರ ಅವರು ಮಂತ್ರಿಗಳೇ ಎಂದರೆ, ಮತ್ತೋಮ್ಮೆ ಬಾರಿ ಮಾಮ್ ಎಂಬುದಾಗಿ ಸಚಿವರನ್ನು ಕರೆಯುತ್ತಿದ್ದರು. ಪಾಲಿಕೆಯ ಇಬ್ಬರು ಶಾಸಕರು ಶ್ರೀಮಂತರಿದ್ದಾರೆ ಎಂದು ಸಚಿವರು ಹೇಳಿದ ಕೂಡಲೇ, ಶಾಸಕ ಬಿ.ನಾಗೇಂದ್ರ ಪಾಲಿಕೆಯ ಸದಸ್ಯರು ನನಗಿಂತ ಶ್ರೀಮಂತರಿದ್ದಾರೆ ಎಂದು ಸಭೆಯಲ್ಲಿ ನಗೆಚಟಾಕಿ ಹಾರಿಸಿದರು. ಕಲುಷಿತ ನೀರಿಂದ ಜನರು ಆಸ್ವಸ್ಥರಾದರೆ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ ಜವಾಬ್ದಾರಿ ಹೊತ್ತು ಮನೆಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಸರಿಯಾಗಿ ಕೆಲಸ ಮಾಡು ಎಂದು ಖಡಕ್ ವಾರ್ನಿಂಗ್ ನೀಡಿದರು. 2010ರ ವೇಳೆ ಬಳ್ಳಾರಿಯಲ್ಲಿ ಅಧಿಕಾರಿಗಳು ಸೇವೆ ಸಲ್ಲಿಸಲು ಭಯಪಡುತ್ತಿದ್ದರು. ಆದರೆ, ಈಗ ಪ್ರಜಾಪ್ರಭುತ್ವ ರೀತಿಯಲ್ಲಿ  ನಡೆಯುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಆಡಳಿತಕ್ಕೆ ಸಚಿವ ಸುರೇಶ್ ಟಾಂಗ್ ನೀಡಿದರು. ಪಾಲಿಕೆಯ ಅಧಿಕಾರಿಗಳು ತೆರಿಗೆ ಸಂಗ್ರಹಣೆಗೆ ಪಾಲಿಕೆಯ ಸದಸ್ಯರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಡಿ. ಮುಂಬರುವ ಚುನಾವಣೆಯಲ್ಲಿ ಸದಸ್ಯರಿಗೆ ಮತ ಹಾಕುವುದಿಲ್ಲ ಎಂದರು. ಸಭೆಯಲ್ಲಿ ಮಹಿಳಾ ಸದಸ್ಯರ ಪತ್ನಿ ಬದಲಾಗಿ ಪತಿಯರು ಭಾಗವಹಿಸಿ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಸಚಿವರು ಪ್ರಸ್ತಾಪಿಸಿವುದು ಕಂಡು ಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net