ಬಾರದ ಬೆಳೆ ವಿಮೆ ಪರಿಹಾರ

 ಕೆ.ಎಂ.ಸೋಮಸುಂದರ್
ಕೆ.ಎಂ.ಸೋಮಸುಂದರ್
Published on

ಪ್ರಮುಖ ಮುಖ್ಯಾಂಶಗಳು

  • 12,710 ರೈತರಿಗೆ ಬಿಡುಗಡೆಯಾಗಿಲ್ಲ
  • ಪ್ರಸ್ತಕ ಸಾಲಿನ ನೋಂದಣಿ ಆರಂಭ
ಬಳ್ಳಾರಿ : ಕಳೆದ ಸಾಲಿನ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾದ 2025-26ನೇ ಮುಂಗಾರು ಹಾಗೂ ಹಿಂಗಾರಿನ 12,710 ರೈತರಿಗೆ ವಿಮೆ ಹಣ ಬಿಡುಗಡೆಯಾಗಬೇಕಿದೆ. ಈಗಾಗಲೇ ಮುಂಗಾರು ಆರಂಭವಾಗಿದ್ದು, ಕೆಲ ದಿನಗಳಲ್ಲೇ ಭತ್ತ ನಾಟಿ ಚಟುವಟಿಕೆ ಆರಂಭವಾಗಲಿದೆ. ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಎರಡು ಕಾಲುವೆಗಳು ಜಿಲ್ಲೆಯಲ್ಲಿ ಹಾದು ಹೋಗಿರುವುದರಿಂದ ಶೇ. 80ರಷ್ಟು ಭತ್ತ ಬೆಳೆಯಲಿದ್ದಾರೆ.
ಕಳೆದ ಸಾಲಿನ ವಿಮೆ ಪರಿಹಾರ ಬಂದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಭತ್ತದ ಸಸಿ, ಟ್ರಾೃಕ್ಟರ್ ಬಾಡಿಗೆ, ರಸಗೊಬ್ಬರ ಹಾಗೂ ಕೂಲಿ ಕಾರ್ಮಿಕರಿಗೆ ಹಣ ನೀಡಲು ರೈತರು ಕೈ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಅಕಾಲಿಕ ಮಳೆ, ಕೀಟ ಬಾಧೆ ಹಾಗೂ ಇತರೆ ರೋಗಗಳಿಂದ ಬೆಳೆ ಹಾನಿಯಾದರೆ ರೈತರಿಗೆ ಪರಿಹಾರ ರೂಪವಾಗಿ ಬೆಳೆ ವಿಮೆ ಕೈಹಿಡಿಯಲಿದೆ ಎಂಬ ಉದ್ದೇಶದಿಂದ ಕೃಷಿ ಇಲಾಖೆಯು ಜಿಲ್ಲೆಯ ರೈತರಿಗೆ ವಿಮಾ ಜಾಗೃತಿ ಮೂಡಿಸುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬೆಳೆ ವಿಮೆ ನೋಂದಾಯಿಸಿಕೊಳ್ಳುವಲ್ಲಿ ರೈತರ ಹೆಚ್ಚಿನ ಸಂಖ್ಯೆ ಹೆಚ್ಚಿತ್ತಿರುವುದು ಒಂದಡೆಯಾದರೆ, ರೈತರಿಗೆ ಸಕಾಲಕ್ಕೆ ವಿಮೆ ಬಿಡುಗೆಡೆಯಾಗುತ್ತಿಲ್ಲ ಎಂಬುದು ರೈತರಿಗೆ ಬೇಸರ ಮೂಡಿಸಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಳ : 202-23ನೇ ಮುಂಗಾರಿನಲ್ಲಿ 4,023 ರೈತರು ವಿಮೆ ಪಾವತಿಸಿದ್ದು, ಈ ಪೈಕಿ 1,766 ರೈತರಿಗೆ 4.26 ಕೋಟಿ ರೂ., 2022-23ನೇ ಹಿಂಗಾರು / ಬೇಸಿಗೆಯಲ್ಲಿ 716 ರೈತರ ಪೈಕಿ 558 ರೈತರಿಗೆ 1.50 ಕೋಟಿ ರೂ., 2023-24ನೇ ಸಾಲಿನ ಮುಂಗಾರು 4,757 ರೈತರ ಪೈಕಿ 3,210 ರೈತರಿಗೆ 7.58 ಕೋಟಿ ರೂ., 2023-24ನೇ ಹಿಂಗಾರು / ಬೇಸಿಗೆಯಲ್ಲಿ 5890 ರೈತರ ಪೈಕಿ 2009 ರೈತರಿಗೆ 5.16 ಕೋಟಿ ರೂ., 2024-25ನೇ ಮುಂಗಾರಿನಲ್ಲಿ 15,974 ರೈತರ ಪೈಕಿ 5,401 ರೈತರಿಗೆ 9.11 ಕೋಟಿ ರೂ., 2024-25ನೇ ಹಿಂಗಾರು /ಬೇಸಿಗೆಯಲ್ಲಿ 5608 ರೈತರ ಪೈಕಿ 3,093 ರೈತರಿಗೆ 5.17 ಕೋಟಿ ರೂ. 2025-26 ಮುಂಗಾರಿನಲ್ಲಿ 11,710 ರೈತರ ಪೈಕಿ ಕೇವಲ 148 ರೈತರಿಗೆ 26.18 ಲಕ್ಷ ರೂ. ಬಿಡುಗಡೆಯಾಗಿದೆ.
2025-26ನೇ ಸಾಲಿನ ಮುಂಗಾರಿನ 9080 ರೈತರು ಹಾಗೂ 2025-26ನೇ ಹಿಂಗಾರು/ಬೇಸಿಗೆಯಲ್ಲಿ 3090 ನೋಂದಾಯಿಸಿದ್ದು ಸೇರಿ ಒಟ್ಟು 12,710 ರೈತರಿಗೆ ವಿಮೆ ಹಣ ಬಿಡುಗೆಡೆಯಾಗಬೇಕಿದೆ. ಬಿಮಾ ಯೋಜನೆಯಡಿ ಜಿಲ್ಲೆಗೆ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯೂ ರೈತರಿಗೆ ವಿಮಾ ಹಣವನ್ನು ಕಂತು ರೂಪದಲ್ಲಿ ಪಾವತಿಸಿಕೊಂಡಿದೆ. ಸದ್ಯ, ಈ ಕಂಪನಿಯೇ ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕಿದೆ.
ತಂತ್ರಜ್ಞಾನ ಮಾದರಿ ಹಿನ್ನೆಲೆ ವಿಳಂಬ : ರಾಜ್ಯದಲ್ಲಿ ಭತ್ತದ ಬೆಳೆ ವಿಮೆ ಇತ್ಯರ್ಥಕ್ಕೆ ಹೊಸ ತಂತ್ರಜ್ಞಾನ ಆಧಾರಿತ ಯೆಸ್-ಟೆಕ್ ಮಾದರಿಯಲ್ಲಿ ಭತ್ತದ ಇಳುವರಿಯನ್ನು ನಿಖರವಾಗಿ ಪರಿಗಣಿಸಲು ಈ ಹೊಸ ಮಾದರಿ ಪ್ರಕ್ರಿಯೆಗೊಳಿಸಲಾಗುತ್ತಿದೆ. ಸದ್ಯ ಪ್ರಕ್ರಿಯೆ ಪ್ರಸ್ತುತ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡ ತಕ್ಷಣವೇ ರೈತರ ಖಾತೆಗಳಿಗೆ ವಿಮಾ ಹಣ ಬಿಡುಗಡೆಯಾಗಲಿದೆ. ಹೊಸ ತಂತ್ರಜ್ಞಾನವು ದೀರ್ಘಾವಧಿಯಲ್ಲಿ ಪಾರದರ್ಶಕತೆಗೆ ಸಹಕಾರಿಯಾಗಿದ್ದರೂ, ಸದ್ಯದ ವಿಳಂಬ ನೀತಿಯು ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ. ಸರ್ಕಾರ ಶೀಘ್ರವಾಗಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಹಣ ಬಿಡುಗಡೆ ಮಾಡಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.
ಬಾಕ್ಸ್ : 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಶೇಂಗಾ(1704), ಮೆಕ್ಕೆಜೋಳ (1286) ಹಾಗೂ ತೊಗರಿ (2314)ಬೆಳೆಗಳಿಗೆ ಬೆಳೆ ವಿಮೆ ಮಾಡಿದ ರೈತರಿಗೆ ಬೆಳೆ ವಿಮೆ ಪರಿಹಾರ ಬಾರದ ಕಾರಣ 2025-26ನೇ ಸಾಲಿನಲ್ಲಿ ಬೆಳೆ ವಿಮೆ ನೋಂದಣಿ ಪ್ರಗತಿ ಕುಂಠಿತಗೊಂಡಿತ್ತು. ಸದ್ಯ, ಪ್ರಸ್ತಕ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಎಷ್ಟು ರೈತರು ನೋಂದಾಯಿಸಿಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
"

ಕೋಟ್... ಜಿಲ್ಲೆಯಲ್ಲಿ ಬಿಮಾ ಯೋಜನೆಯಡಿ ಮುಂಗಾರಿನಲ್ಲಿ ನೊಂದಣಿಯಾದ ರೈತರಿಗೆ ಯೆಸ್ ಟೆಕ್ ಮಾದರಿ ಅಳವಡಿಕೆ ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ.- ಕೆ.ಎಂ.ಸೋಮಸುಂದರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net