ಹರಪನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಆಯೋಜಿಸಿದ್ದ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು. ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ದಾಸ ಕರಿಯಪ್ಪ, ಮಾಜಿ ಸಂಸದ ವೈ.ದೇವೇಂದ್ರಪ್ಪ, ದಾವಣಗೆರೆ ಲೋಕಸಭಾ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಇದ್ದರು.
ಹರಪನಹಳ್ಳಿ: ದೇಶದ ಪ್ರಧಾನಿಗಳನ್ನು ಅನ್ಯ ದೇಶಗಳಲ್ಲಿ ಆಹ್ವಾನಿಸಲು ಕೀಳರಿಮೆಯಿಂದ ಕಾಣುವ ಕಾಲವಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಡೀ ವಿಶ್ವವೇ ಅವರ ಆಗಮನಕ್ಕೆ ಕಾಯುತ್ತಿದೆ ಎಂದು ದಾವಣಗೆರೆ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.
ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಶುಕ್ರವಾರ ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕಾಗಿ ಮತ್ತು ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಕಾರ್ಯಕರ್ತರ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಎಲ್ಲ ಇಲಾಖೆಗಳಲ್ಲಿ ಲೂಟಿ ಮಾಡುವುದರಲ್ಲಿ ಮುಳುಗಿಹೋಗಿದೆ. ತಾಲೂಕಿನಲ್ಲಿರುವ ಜನರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಗುಳೆ ಹೋಗುವ ಪದ್ಧತಿಯನ್ನು ತಡೆಯಬೇಕಿದೆ. ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಮಾಡಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.
ಹರಿಹರ ಶಾಸಕ ಬಿ. ಪಿ. ಹರೀಶ್ ಮಾತನಾಡಿ, ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿಗೆ ಭಾರತವನ್ನು ಸೇರಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ರಾಹುಲ್ ಗಾಂಧಿಯನ್ನು ಮೋದಿ ಅವರಿಗೆ ಹೋಲಿಕೆ ಮಾಡುವುದು ಹಾಸ್ಯಾಸ್ಪದ. ವಿವಿಧ ನಿಗಮಗಳ ಹಣವನ್ನು ನೇರವಾಗಿ ರಾಜ್ಯ ಸರ್ಕಾರದ ಖಾತೆಗೆ ಹಾಕಿಕೊಂಡು ಅದರಿಂದ ಚುನಾವಣೆಗಳನ್ನು ನಡೆಸಿ, ಬಡವರ ಹಣವನ್ನು ಲೂಟಿ ಮಾಡುವ ಕೆಲಸವಾಗುತ್ತಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವೆಂದು ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಈಗಾಗಲೇ ಸಮೀಕ್ಷೆಯಲ್ಲಿ ವರದಿ ಪ್ರಕಟಿಸಿವೆ ಎಂದು ತಿಳಿಸಿದರು.
ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಬಳ್ಳಾರಿಯ ಕರುಣಾಕರ ರೆಡ್ಡಿ ಅವರಿಗೆ 2008ರಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿ ಇಂದು ಬಿಜೆಪಿ ಕಾರ್ಯಕರ್ತರು ಪಶ್ಚಾತ್ತಾಪ ಪಡುವಂತಾಗಿದೆ. ರೆಡ್ಡಿ ಹರಪನಹಳ್ಳಿಗೆ ಬ್ರಿಟಿಷರಿದ್ದಂತೆ. ಆದ್ದರಿಂದ ಸ್ಥಳೀಯವಾಗಿಯೇ ಐವರು ಪ್ರಬಲ ಆಕಾಂಕ್ಷಿಗಳಿದ್ದು, ಅವರಲ್ಲಿ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಎಲ್ಲರೂ ಬೆಂಬಲಿಸಬೇಕು. ರೆಡ್ಡಿಯನ್ನು ಹರಪನಹಳ್ಳಿಯಿಂದ ತೊಲಗಿಸಿ ಅವರು ಮಾಡಿದ ಮೋಸಕ್ಕೆ ನಾವುಗಳು ಉತ್ತರ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.
ಬಿಜೆಪಿ ಪ್ರಬಲ ಆಕಾಂಕ್ಷಿ ಅಭ್ಯರ್ಥಿಗಳಾದ ವೈ. ಡಿ. ಅಣ್ಣಪ್ಪ, ಜಿ. ನಂಜನಗೌಡ, ಡಾ. ರಮೇಶ್ ನಾಯ್ಕ ಹಾಗೂ ಮುಖಂಡರಾದ ಓಂಕಾರಗೌಡ, ಎಂ. ಪಿ. ನಾಯ್ಕ, ಕುಸುಮಾ ಜಗದೀಶ, ಕಣಿವಿಹಳ್ಳಿ ಮಂಜುನಾಥ, ಜವಳಿ ಮಹೇಶ ಸೇರಿದಂತೆ ಅನೇಕರಿದ್ದರು.