ಸಂಡೂರಿನಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಕೆಪಿಆರ್‌ಎಸ್, ಸಿಐಟಿಯು, ಸಿಪಿಐ ಮತ್ತಿತರ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು. ಸಿಐಟಿಯು ತಾಲೂಕು ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ತಾಲೂಕು ಕಾರ್ಯದರ್ಶಿ ಎಸ್.ಖಾಲೂಬಾ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ಖಲಂದರ ಬಾಷಾ, ಪಂಪನಗೌಡ ಇತರರಿದ್ದರು.
ಸಂಡೂರು: ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿರುವ ಅಶಾಂತಿ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಒತ್ತಾಯಿಸಿ ಕೆಪಿಆರ್‌ಎಸ್, ಸಿಐಟಿಯು, ಸಿಪಿಐ ಇತರ ವಿವಿಧ ಸಂಘಟನೆಗಳಿಂದ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ ಮಾತನಾಡಿ, ಮತ್ತೆ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗಳಿಂದ ಜಿಲ್ಲೆಯ ಜನತೆ ಅತಂಕಕ್ಕೊಳಗಾಗಿದ್ದಾರೆ. ಕಳೆದ ಹಲವು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಮೂಲಕ ಗಲಭೆ ಸೃಷ್ಟಿಸಿದ್ದಾರೆ. ಶಾಸಕರಾದ ಭರತ್ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನೇರವಾಗಿ ಗಲಭೆಯಲ್ಲಿ ಭಾಗವಹಿಸಿ ಪ್ರಚೋದನೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಜನಾರ್ದನರೆಡ್ಡಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಗಡಿಪಾರನ್ನು ವಾಪಸ್ ಪಡೆದ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಮ್ಮೆ ಹಿಂಸಾತ್ಮಕ ಕೃತ್ಯಗಳು ಮರುಕಳಿಸುತ್ತಿವೆ ಎಂದು ದೂರಿದರು.
ಸಂಡೂರಿನಲ್ಲಿ ಕಾಂಗ್ರೆಸ್‌ನ ರಮೇಶ್ ಗಡಾದ್ ಅಕ್ರಮ ಗ್ರಾವೆಲ್ ಸಾಗಣೆ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡರಾದ ಬಂಗಾರು ಹನುಮಂತು, ಜಿ.ಟಿ.ಪಂಪಾಪತಿ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಮೇಶ್ ಗಡಾದ್, ಜಿ.ಟಿ.ಪಂಪಾಪತಿ ವಿರುದ್ಧ 18 ಕೇಸ್‌ಗಳಿವೆ. ಅವರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿಸಬೇಕೆಂದು ಪ್ರತಿದೂರು ನೀಡಿದ್ದಾರೆ. ಇಂತಹ ಮುಖಂಡರು ಅಕ್ರಮ ಕೆಲಸಗಳಲ್ಲಿ ತೊಡಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಅಕ್ರಮ ಗಣಿಗಾರಿಕೆ ಹಾಗೂ ಗ್ರಾವೆಲ್ ಸಾಗಣೆ ತಡೆಯಬೇಕು ಎಂದು ಆಗ್ರಹಿಸಿದರು.