ಕುರುಗೋಡು ತಾಲೂಕಿನ ಯರಿಂಗಳಿಗಿ ಗ್ರಾಮದಲ್ಲಿ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ, ತಾಪಂ, ಗ್ರಾಪಂ ಸಹಯೋಗದಲ್ಲಿ ವಿಶೇಷಚೇತನರ ಸಮನ್ವಯ ಸಮಿತಿ ಸಭೆ ನಡೆಯಿತು.
ಕುರುಗೋಡು: ಅಂಗವಿಕಲ ಮಕ್ಕಳ ಬಗ್ಗೆ ಪಾಲಕರು ಉದಾಸೀನ ಮಾಡದೆ ಕಾಳಜಿ ವಹಿಸಬೇಕೆಂದು ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ಲಕ್ಷ್ಮಣ ಹೇಳಿದರು.
ಯರಿಂಗಳಿಗಿ ಗ್ರಾಮದಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ, ತಾಪಂ, ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಚೇತನರ ಸಮನ್ವಯ ಸಮಿತಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಅಂಗವಿಕಲರ ಆಸಕ್ತಿಗನುಗುಣವಾಗಿ ಅವರಿಗೆ ಅವಕಾಶ ಕಲ್ಪಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತೆ ನೀಲಮ್ಮ ಮಾತನಾಡಿ, ಎಲ್ಲರೂ ಗುರುತಿನ ಚೀಟಿ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಅಂಗವೈಕಲ್ಯ ಪ್ರಮಾಣ ಶೇ.75 ಇದ್ದರೆ 1800 ರೂ., ಶೇ.65 ಇದ್ದರೆ 800 ರೂ., ಮತ್ತು ಶೇ.65 ಕ್ಕಿಂತ ಕಡಿಮೆ ಇದ್ದರೆ 400 ರೂ., ಮಾಸಾಶನ ದೊರೆಯುತ್ತದೆ ಎಂದರು.