ಕಂಪ್ಲಿ ಸಮೀಪದ ಇಟಗಿಯಲ್ಲಿ ಕೆಆರ್‌ಎಸ್ ಹಮ್ಮಿಕೊಂಡಿದ್ದ ಅರಿವಿನ ಕ್ರಾಂತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೆಆರ್‌ಎಸ್ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ, ಜಿಲ್ಲಾ ಉಸ್ತುವಾರಿ ರಘು ಜಾಣಗೆರೆ, ಜಿಲ್ಲಾಧ್ಯಕ್ಷ ವಿ.ಯುಗಂಧರ, ಪ್ರಧಾನ ಕಾರ್ಯದರ್ಶಿ ಪ್ರಕಾಶರೆಡ್ಡಿ, ಎಸ್ಸಿ-ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪ.ಯ.ಗಣೇಶ, ತಾಲೂಕು ಅಧ್ಯಕ್ಷ ಎಂ.ಟಿ.ಶಂಕರ್, ಗೌರವ ಅಧ್ಯಕ್ಷ ಎಚ್.ರೆಹಮಾನ್‌ಸಾಬ್ ಇತರರಿದ್ದರು.
ಕಂಪ್ಲಿ: ಬಡತನ ನಿರ್ಮೂಲನೆಗೆ ಮದ್ಯಮುಕ್ತ ಕರ್ನಾಟಕವನ್ನಾಗಿ ರೂಪಿಸುವುದು ಅಗತ್ಯವಾಗಿದೆ ಎಂದು ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.
ಇಟಗಿ ಗ್ರಾಮದಲ್ಲಿ ಕೆಆರ್‌ಎಸ್‌ನಿಂದ ಹಮ್ಮಿಕೊಂಡಿದ್ದ ಅರಿವಿನ ಕ್ರಾಂತಿ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಹಳ್ಳಿಗಳ ಅಂಗಡಿ, ಗೂಡಂಗಡಿ, ಕಿರಾಣಿ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟವಾಗುತ್ತಿರುವುದರಿಂದ ಜನತೆ ಬಡತನ ಅನುಭವಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಉದ್ರಿ ನೀಡುತ್ತಿರುವುದರಿಂದ ಬಡತನ ಹೆಚ್ಚುತ್ತಿದೆ. ಇದರಿಂದ ರಾಜ್ಯದ ಕಲ್ಯಾಣ ಯೋಜನೆಗಳು ವಿಫಲವಾಗುತ್ತಿವೆ ಎಂದು ದೂರಿದರು.
ಮದ್ಯ ಮಾರಾಟ ನಿಷೇಧವಾಗದ ಹೊರತು ರಾಜ್ಯದ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಸರ್ಕಾರ ನಡೆಯುವುದೇ ಅಬಕಾರಿ ಆದಾಯದ ಮೂಲಕ ಎಂದು ಸುಳ್ಳಾಗಿ ಬಿಂಬಿಸುತ್ತಿದ್ದು, ವಾಸ್ತವದಲ್ಲಿ ರಾಜ್ಯದ ಒಟ್ಟಾರೆ ಆದಾಯದಲ್ಲಿ ಶೇ.10ಕ್ಕಿಂತ ಕಡಿಮೆ ಅಬಕಾರಿ ಆದಾಯ ಇದೆ. ಗ್ರಾಮೀಣ ಮಹಿಳೆಯರು ಕುಟುಂಬದ ಸದಸ್ಯರನ್ನು ಮದ್ಯವ್ಯಸನದಿಂದ ಪಾರುಮಾಡಲು ಪಣ ತೊಡಬೇಕು ಎಂದರು.
ರಾಜ್ಯದಲ್ಲಿ ಮದ್ಯ ನಿಷೇಧ ಮತ್ತು ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಅಬಕಾರಿ ನಿರೀಕ್ಷಕ ವೀರಾಂಜನೇಯಲು, ಪಿಡಿಒ ಹಾಲಹರವಿ ಶೇಷಗಿರಿ, ಕಂದಾಯ ಅಧಿಕಾರಿ ವೈ.ಎಂ.ಜಗದೀಶಗೆ ಮನವಿ ಸಲ್ಲಿಸಲಾಯಿತು. ಮದ್ಯದ ಟೆಟ್ರಾ ಪ್ಯಾಕೆಟ್‌ಗಳನ್ನು ಬೀದಿಯಲ್ಲಿ ದಹಿಸಲಾಯಿತು.