ನರೇಗಾ ಕಾಯ್ದೆಯನ್ನು ಮುಂದುವರಿಸುವ ಕುರಿತು ಗ್ರಾಮಸಭೆಯಲ್ಲಿ ಠರಾವು ಪಾಸ್ ಮಾಡಲು ಒತ್ತಾಯಿಸಿ ತೋರಣಗಲ್‌ನಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಗ್ರಾಪಂ ಅಧ್ಯಕ್ಷ ಅಳ್ಳಾಪುರ ವಿರೇಶಪ್ಪ, ಪಿಡಿಒ ಪ್ರಾಣೇಶಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಪ್ರಮುಖರಾದ ಎನ್.ಶಂಕಣ್ಣ, ಎಂ.ತಾತಪ್ಪ, ಯು.ಕೋನಪ್ಪ, ಎಚ್.ಈರಣ್ಣ, ಶಂಕರಗೌಡ, ರಾಮಾಲಿ ಇದ್ದರು.
ಸಂಡೂರು: ಉದ್ಯೋಗ ಖಾತ್ರಿ ಕಾಯ್ದೆಯನ್ನು ಮುಂದುವರಿಸುವ ಕುರಿತು ಗ್ರಾಮಸಭೆಯಲ್ಲಿ ಠರಾವು ಪಾಸ್ ಮಾಡಬೇಕೆಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಒತ್ತಾಯಿಸಿದರು.
ತೋರಣಗಲ್‌ನಲ್ಲಿ ಗ್ರಾಪಂ ಅಧ್ಯಕ್ಷ ಅಳ್ಳಾಪುರದ ವಿರೇಶ್ ಹಾಗೂ ಪಿಡಿಒ ಪ್ರಾಣೇಶಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು, ಮೇಟಿಗಳು, ವಿಮುಕ್ತ ದೇವದಾಸಿಯರ ಜೀವನೋಪಾಯಕ್ಕೆ ಅನುಕೂಲವಾಗಿದೆ ಎಂದರು.
ನರೇಗಾ ಯೋಜನೆ ಕೇವಲ ಉದ್ಯೋಗವಲ್ಲ, ಅದು ನಮ್ಮ ಹಕ್ಕಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ನರೇಗಾ ಕಾಯ್ದೆಯನ್ನು ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆ ಜಾರಿಗೊಳಿಸಿದ್ದು, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಇದರಿಂದ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸಿ, ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸುವಂತೆ ಠರಾವು ಪಾಸ್ ಮಾಡಬೇಕೆಂದು ಆಗ್ರಹಿಸಿದರು.