ಸಿದ್ದರಾಮಯ್ಯಗೆ ಕಾಂಗ್ರೆಸ್ ಅಪಮಾನ

ಬಿ.ಶ್ರೀರಾಮುಲು
ಬಿ.ಶ್ರೀರಾಮುಲು
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಪಕ್ಷವೇ ನೋವುಂಟು ಮಾಡಿದೆ
  • ಫೋಟೋ ಇಟ್ಟುಕೊಂಡೇ ಹಲವರು ಶಾಸಕರಾಗಿ ಗೆದ್ದಿದ್ದಾರೆ
ಬಳ್ಳಾರಿ : ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅಪಮಾನ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಟು ವರ್ಷ ರಾಜ್ಯವನ್ನು ಮುನ್ನಡೆಸಿದ ನಾಯಕನಿಗೆ ಗೌರವದಿಂದ ವರ್ತಿಸಬೇಕಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ನಿರಂತರ ಕಿರುಕುಳ ನೀಡಿ ನೆಮ್ಮದಿಯಿಂದ ಕೆಲಸ ಮಾಡಲು ಬಿಡಲಿಲ್ಲ ಎಂದು ಆರೋಪಿಸಿದರು.
2023ರಲ್ಲಿ ಮುಖ್ಯಮಂತ್ರಿ ಆದ ದಿನದಿಂದಲೇ ಅವರನ್ನು ಗುರಿಯಾಗಿಸಿ ಒಳಗೊಳಗೆ ರಾಜಕೀಯ ನಡೆಯುತ್ತಿತ್ತು. ಕೊನೆಗೂ ರಾಜೀನಾಮೆ ಕೊಡಿಸಲಾಯಿತು. ಅವರ ಮುಖದಲ್ಲಿದ್ದ ನೋವನ್ನು ನೋಡಿದಾಗ ನನಗೂ ಬೇಸರವಾಯಿತು ಎಂದರು. ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷವೇ ನೋವುಂಟು ಮಾಡಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಸದಾ ಒಬಿಸಿ ನಾಯಕರ ಬೆಂಬಲದ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶದಲ್ಲೇ ಕಾಂಗೆಸ್ ಆಡಳಿತದಲ್ಲಿರುವ ಪ್ರಮುಖ ರಾಜ್ಯದ ಓಬಿಸಿ ನಾಯಕನನ್ನು ಕೆಳಗಿಳಿಸಿರುವುದಕ್ಕೆ ಏನು ಉತ್ತರ ಕೊಡುತ್ತಾರೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಬಹುತೇಕರು ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡೇ ಹಲವರು ಶಾಸಕರಾಗಿ ಗೆದ್ದಿದ್ದಾರೆ. ಅವರ ಹೆಸರಿನಿಂದಲೇ ಕಾಂಗ್ರೆಸ್ ಈ ಹಂತಕ್ಕೆ ಬಂದಿದೆ. ಈಗ ಅದೇ ನಾಯಕರು ಡಿಕೆ ಶಿವಕುಮಾರ್ ಮನೆ ಮುಂದೆ ನಿಂತಿದ್ದಾರೆ ಎಂದು ಟೀಕಿಸಿದರು. ಜಿಲ್ಲೆಯ ಸ್ಥಳೀಯ ಶಾಸಕರು ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಕನಿಷ್ಠ ನೋವೂ ಕಾಣಿಸಲಿಲ್ಲ. ನಗುತ್ತಾ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೂಗುಚ್ಚ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹಿತಕ್ಕಾಗಿ ರಾಜೀನಾಮೆ ನೀಡಿದ್ದರು. ಆದರೆ, ಸಿದ್ದರಾಮಯ್ಯ ವಿಚಾರದಲ್ಲಿ ಕುರ್ಚಿಯನ್ನೇ ಕಸಿದುಕೊಳ್ಳಲಾಗಿದೆ. ರಾಜಕೀಯವಾಗಿ ನಾನು ಸಿದ್ದರಾಮಯ್ಯರನ್ನು ವಿರೋಧಿಸಿದ್ದೇನೆ. ಆದರೆ, ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಬೇರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ವಿಜಯೇಂದ್ರ ಅವರೇ ಬಹುತೇಕ ಮುಂದುವರಿಯುತ್ತಾರೆ ಎಂದು ಭವಿಷ್ಯ ನುಡಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net