ಕಾಂಗ್ರೆಸ್ ನೂರು ಸುಳ್ಳಿನ ಸಮಾವೇಶ

ಬಿ.ಶ್ರೀರಾಮುಲು
ಬಿ.ಶ್ರೀರಾಮುಲು
Published on

ಪ್ರಮುಖ ಮುಖ್ಯಾಂಶಗಳು

  • ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ
  • ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆತ್ಮಹತ್ಯೆಗಳ ಪ್ರಮಾಣ ಹೆಚ್ಚುತ್ತಿದೆ
ಬಳ್ಳಾರಿ : ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಅದನ್ನೇ ಈಗ ಸಮಾವೇಶದ ಮೂಲಕ ಜನರಿಗೆ ತೋರಿಸಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಎಲ್ಲ ಇಲಾಖೆಗಳಲ್ಲೂ ಆಡಳಿತ ಸಂಪೂರ್ಣ ಕುಸಿದಿದೆ. ಇಂತಹ ಸಂದರ್ಭದಲ್ಲಿ ಮೂರು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಸುಳ್ಳಿನ ಮಾಲೀಕರಾದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಆ ಸುಳ್ಳಿನ ಸಾಕ್ಷಿದಾರರು. ಸುಳ್ಳಿನ ಅಡಿಪಾಯದ ಮೇಲೆಯೇ ಈ ಸರ್ಕಾರ ನಡೆಯುತ್ತಿದೆ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನ ಬಾಕಿಯಾಗಿದೆ. ಬೀಜ ಮತ್ತು ಕೃಷಿ ವೆಚ್ಚಗಳು ಏರಿಕೆಯಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆತ್ಮಹತ್ಯೆಗಳ ಪ್ರಮಾಣ ಹೆಚ್ಚುತ್ತಿದೆ ಎಂದರು.
ಕುಡಿವ ನೀರು, ವಿದ್ಯುತ್, ಭೂ ನೋಂದಣಿ ಸೇರಿದಂತೆ ಎಲ್ಲ ಸೇವೆಗಳ ದರ ಏರಿಕೆಯಾಗಿದೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೆಲಸ ನಡೆಯುತ್ತಿದೆ. ಜನರಿಗೆ ಶಾಶ್ವತ ಅಭಿವೃದ್ಧಿ ನೀಡುವ ಬದಲು ಮೋಸದ ರಾಜಕಾರಣ ನಡೆಯುತ್ತಿದೆ ಎಂದು ವಾಗ್ದಳಿ ನಡೆಸಿದರು. ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ. ವೇತನ ಹೆಚ್ಚಳವೂ ಇಲ್ಲ. ಹಳೆಯ ಬಸ್‌ಗಳೇ ರಸ್ತೆಯಲ್ಲಿ ಓಡುತ್ತಿವೆ. ಪಂಚರ್ ಹಾಕಿಸಲು ಹಣವಿಲ್ಲದ ಪರಿಸ್ಥಿತಿ ಬಂದಿದೆ. ಬಾಗಿಲುಗಳು ಕಿತ್ತು ಹೋದರೂ ದುರಸ್ತಿ ಮಾಡಲಾಗುತ್ತಿಲ್ಲ ಎಂದು ಟೀಕಿಸಿದರು.
ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೇ ಸರ್ಕಾರ ನಿಷೇಧ ಹಿಂಪಡೆಯಲು ಮುಂದಾಗಿರುವುದು ಏಕೆ? ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ಪಾಕಿಸ್ತಾನ ಪರ ಘೋಷಣೆಗಳ ವಿಚಾರದಲ್ಲಿಯೂ ಕಾಂಗ್ರೆಸ್ ಮೌನವಾಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ. ಹಿಂದೂ ಹಬ್ಬಗಳ ಮೇಲೂ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಸೂರ್ಯ ಮತ್ತು ಚಂದ್ರ ಇರುವುದು ಎಷ್ಟು ಸತ್ಯವೂ 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಗುರುಲಿಂಗನೌಡ, ಎಚ್.ಹನುಮಂತಪ್ಪ, ಶ್ರೀನಿವಾಸ್ ಮೋತ್ಕರ್, ವೀರಶೇಖರರೆಡ್ಡಿ, ಮಾರುತಿ ಪ್ರಸಾದ್, ಗುಡಿಗುಂಟೆ ಹನುಮಂತು ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net