ಬಳ್ಳಾರಿ : ತಾಲೂಕಿನ ಕೃಷ್ಣಾನಗರ ಕ್ಯಾಂಪ್‌ನಲ್ಲಿ ಅಳವಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕವನ್ನು ಜಖಂಗೊಳಿಸಿ, ಅವಮಾನ ಮಾಡಿದ ಆರೋಪದಡಿ ಏಳು ಜನರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣಾನಗರ ಕ್ಯಾಂಪ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಳೆದ 15 ವರ್ಷಗಳ ಹಿಂದೆ ಅಂಬೇಡ್ಕರ್ ನಾಮಫಲಕವನ್ನು ಅಳವಡಿಸಲಾಗಿತ್ತು. ವರ್ಷದ ಹಿಂದೆ ಅದೇ ಜಾಗದಲ್ಲಿ ತೆಲುಗು ಚಿತ್ರನಟ ಎನ್‌ಟಿಆರ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ನೆಪದಲ್ಲಿ ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸುವಂತೆ ಸಂಘದ ಸದಸ್ಯರ ಮೇಲೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದಿದ್ದಾಗ ದ್ವೇಷ ಸಾಧಿಸುತ್ತಾ ಬಂದಿದ್ದರು ಎನ್ನಲಾಗಿದೆ.
ಏ. 25ರಂದು ಕ್ಯಾಂಪ್ ನಲ್ಲಿ ನಾಮಫಲಕವನ್ನು ಬಗ್ಗಿಸಿ, ಚಪ್ಪಲಿ ಕಾಲಿನಿಂದ ತುಳಿದು ವಿರೂಪಗೊಳಿಸಿರುವುದ ಕಂಡು ಬಂದಿದೆ. ಘಟನೆ ನಡೆದ ರಾತ್ರಿ ಆರೋಪಿಗಳಾದ ಕುಮಾರ್ ಮತ್ತು ನಾಗೇಂದ್ರ ನಾಮಫಲಕದ ಬಳಿ ಕುಳಿತಿರುವುದನ್ನು ದೂರುದಾರ ಕೆಂಚಪ್ಪ ನೋಡಿದ್ದರು ಎನ್ನಲಾಗಿದೆ. ಮರುದಿನ ಘಟನೆಯ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ಯಾಂಪ್‌ನ ಕಮ್ಮಾ ಸಮುದಾಯಕ್ಕೆ ಸೇರಿದ ಕುಮಾರ್, ನಾಗೇಂದ್ರ, ಹೈದರಾಬಾದ್ ಸೀನ, ರುದ್ರಯ್ಯ, ಕ್ರಾಂತಿ, ದುರುಗಪ್ಪ, ರಾಜು ಎಂಬ ಏಳು ಜನರ ವಿರುದ್ಧ ದೂರು ದಾಖಲಾಗಿದೆ.