ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ವಿಶ್ವ ಭೂ ಮತ್ತು ಜಲ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ.ರಾಜೇಶ್ ಎನ್.ಹೊಸಮನೆ ಉದ್ಘಾಟಿಸಿದರು. ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವರಾದ ಪ್ರೊ.ವಿ.ಲೋಕೇಶ್, ಪ್ರೊ.ಎನ್.ಎಂ ಸಾಲಿ, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ಪ್ರೊ.ಡಾ.ನಾಗಭೂಷನ್ ಚರಂತಿಮಠ ಇತರರಿದ್ದರು.
ಬಳ್ಳಾರಿ : ಸದ್ಯದ ಪರಿಸ್ಥಿತಿಯಲ್ಲಿ ಕುಡಿವ ನೀರನ್ನು ಖರೀದಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಉಸಿರಾಡುವ ಗಾಳಿ ಖರೀದಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ನಗರದ ವಿಎಸ್‌ಕೆ ವಿವಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಸಹಯಗೋಂದಿಗೆ ಮಂಗಳವಾರ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ವಿಶ್ವ ಭೂ ಮತ್ತು ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 80 ಬಿಲಿಯನ್ ವರ್ಷ ಮಾತ್ರವೇ ಭೂಮಿಯ ಆಯುಷ್ಯ ಉಳಿದಿದ್ದು, ಇದನ್ನು ಅರಿತುಕೊಂಡು ಮಾನವನು ಪರಿಸರ ಸಂರಕ್ಷಣೆಗೆ ಕೈಲಾದ ಕಾರ್ಯ ಮಾಡಬೇಕು ಎಂದರು.
ನೆಲ, ಜಲ, ಪರಿಸರ ಒಂದಕ್ಕೊಂದು ಅನ್ಯೋನ್ಯವಾಗಿ ಸಹಬಾಳ್ವೆಯಿಂದ ನೆಲೆಸಿವೆ. ಮನುಷ್ಯನು ಸಹ ಹೊಂದಿಕೊಂಡು ಸಹಬಾಳ್ವೆ ನಡೆಸುವುದು ಅತ್ಯಗತ್ಯವಾಗಿದೆ. ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಅಭಿಯಾನ ಬಿಟ್ಟು ಪರಿಸರ ಸುಧಾರಿಸುವ ಕ್ರಮಗಳನ್ನು ಈಗಲೇ ಅಳವಡಿಸಿಕೊಳ್ಳುವುದು ಸೂಕ್ತ. ಭೂಮಿಯಲ್ಲಿರುವ ಕ್ರಿಮಿ-ಕೀಟಗಳು ನಾಶವಾದರೆ ಇಡೀ ಭೂಮಂಡಲವೇ ನಾಶವಾಗುತ್ತದೆ. ಆದರೆ ಮನುಷ್ಯ ನಾಶವಾದರೆ ಭೂಮಿ ಸಂಪದ್ಭರಿತಗುತ್ತದೆ ಎಂದು ಪ್ರತಿಪಾದಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ್ ಮಾತನಾಡಿ, ಮಾನವನ ಸರಳ ಜೀವನವೇ ಪರಿಸರದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಸದಿಂದ ರಸ ಉತ್ಪಾದಿಸುವ ಕಲೆ ನಾವೆಲ್ಲ ಕಲಿಯಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಸಬೇಕು. ಪಂಚಭೂತಗಳ ರಕ್ಷಣೆ ಮನುಕುಲದ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ. ಪ್ರತಿ ಮನುಷ್ಯನು ಪರಿಸರ ಯೋಧರಾಗಿ ಕೆಲಸ ಮಾಡುವ ಅನಿವಾರ್ಯತೆ ಇಂದು ಎದುರಾಗಿದೆ ಎಂದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಹಸಿ ಕಸ ಮತ್ತು ಒಣ ಕಸಗಳ ಸಮರ್ಪಕ ವಿಂಗಡಣೆಯಿಂದ ಶೇ. 50ರಷ್ಟು ಪರಿಸರ ಹಾನಿ ತಡೆಯಬಹುದು. ಸಾವಯವ ಗೊಬ್ಬರ ನಿರ್ಮಾಣ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು. ಕಾರ್ಯಕ್ರಮ ಮುನ್ನ ವಿವಿಯ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟರು.