ಮಂಗಳವಾರ ಚಲೋ ಚುನಾವಣಾ ಆಯೋಗ

ಎಚ್.ಸಿದ್ದಪ್ಪ
ಎಚ್.ಸಿದ್ದಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಸಾಕ್ಷ್ಯಗಳೊಂದಿಗೆ ಹೋರಾಟ

ಬಳ್ಳಾರಿ :

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಸೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಲೋ ಚುನಾವಣಾ ಆಯೋಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಎಚ್.ಸಿದ್ದಪ್ಪ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ನಾಗರಿಕ ಸಂಘಟನೆಯಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ. ರಾಜ್ಯದ ವಿವಿಧ ಭಾಗಗಳಿಂದ ಎಸ್‌ಐಆರ್‌ನಿಂದ ತೊಂದರೆಗೊಳಗಾದ ಮತದಾರರನ್ನು ಒಗ್ಗೂಡಿಸಿ, ಅವರ ಸಾಕ್ಷ್ಯ ಮತ್ತು ದಾಖಲೆಗಳೊಂದಿಗೆ ಹೋರಾಟ ನಡೆಸಲಾಗುವುದು. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾನೂನು ಹೋರಾಟ ನಡೆಸಲು ಕರ್ನಾಟಕ ನಾಗರಿಕ ಸಮಾಜ ಸಿದ್ಧತೆ ನಡೆಸಿದೆ.

ಕರ್ನಾಟಕದ ಕರಡು ಮತದಾರರ ಪಟ್ಟಿಯ ವಿಶ್ಲೇಷಣೆಯ ಪ್ರಕಾರ, ಲಕ್ಷಾಂತರ ಮತದಾರರನ್ನು ವಿವಿಧ ಕಾರಣಗಳಡಿ ಪಟ್ಟಿಯಿಂದ ಕೈಬಿಡಲಾಗಿದೆ. ಸುಮಾರು 43 ಲಕ್ಷ ಮತದಾರರನ್ನು ಅನ್‌ಮ್ಯಾಪ್, ಲಾಜಿಕಲ್ ಡಿಸ್ಕ್ರೆಪೆನ್ಸಿ ಸೇರಿದಂತೆ ವಿವಿಧ ವರ್ಗಗಳಲ್ಲಿ ಗುರುತಿಸಿ, ಅವರ ನಾಗರಿಕತ್ವದ ಕುರಿತು ಅನುಮಾನ ವ್ಯಕ್ತಪಡಿಸಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಉದ್ಯೋಗ ಹಾಗೂ ಇನ್ನಿತರ ಕಾರಣಗಳಿಂದ ಬೇರೆ ಊರುಗಳಿಗೆ ಸ್ಥಳಾಂತರಗೊಂಡ ಮತದಾರರನ್ನು ಹಿಂದಿನ ವಿಳಾಸದಲ್ಲಿ ಕಾಣಿಸಿಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಸರಿಯಲ್ಲ. ಅಂತಹ ಮತದಾರರಿಗೆ ಹೊಸ ವಿಳಾಸಕ್ಕೆ ಮತದಾರರ ಗುರುತನ್ನು ವರ್ಗಾಯಿಸಿಕೊಳ್ಳಲು ಸಮರ್ಪಕ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಅವರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದರು. ಅರ್ಹ ಮತದಾರರೊಬ್ಬರೂ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಎಲ್. ಮಾರೆಣ್ಣ, ಎನ್.ಡಿ.ವೆಂಕಮ್ಮ, ಪರ್ವೀನ್, ಮಲ್ಲೇಶ್ವರಿ, ಗಂಗಾಧರ್, ಆರ್.ಮಾಧವರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net