ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ಅಂತರಾಷ್ಟ್ರೀಯ ಸಮ್ಮೇಳನವನ್ನು ಬೇಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಶ್ವನಾಥ ಉದ್ಘಾಟಿಸಿದರು. ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಚಿತ್ರನಟ ಚೇತನಕುಮಾರ, ಮೌಲ್ಯಮಾಪನ ಕುಲಸಚಿವ ಎನ್.ಎಂ.ಸಾಲಿ, ಲೆಕ್ಕಪತ್ರ ಇಲಾಖೆಯ ನಿ.ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ, ಪ್ರೊ.ಜೆ.ತಿಪ್ಪೇರುದ್ರಪ್ಪ, ಪ್ರೊ.ಗೌರಿ ಮಾಣಿಕ್ ಮಾನಸ ಇದ್ದರು.
ಬಳ್ಳಾರಿ : ಜಾತಿ ಸಂಕೋಲೆ ತೊಡೆದು ಹಾಕಲು ಬಾಬಾಸಾಹೇಬರು ಬುದ್ಧನ ಮಾರ್ಗ ಅನುಸರಿಸಿದರು. ಆದರೆ, ಇಂದು ನಗರಗಳಿಂದ ಹಳ್ಳಿಯವರೆಗೆ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಶ್ವನಾಥ ಬೇಸರ ವ್ಯಕ್ತಪಡಿಸಿದರು.
ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಇನ್ಸಿಟ್ಯೂಟ್ ಆಫ್ ಡಾ.ಬಿ.ಆರ್. ಅಂಬೇಡ್ಕರ್ ಟ್ರೇನಿಂಗ್, ರಿಸರ್ಚ್ ಆ್ಯಂಡ್ ಎಕ್ಸ್ಟೆನ್ಷಿಯನ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಪ್ರಬುದ್ಧ ಭಾರತ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿಗಳಿಂದ ಪಾರ್ಲಿಮೆಂಟಿನವರೆಗೂ ಜಾತಿ ಆಧಾರದ ಮೇಲೆ ಜನನಾಯಕರ ಆಯ್ಕೆಯಾಗುತ್ತದೆ. ಭಾರತದಂತಹ ಜ್ಯಾತ್ಯಾತೀತ ರಾಷ್ಟದಲ್ಲಿ ಅಸ್ಪಶ್ಯತೆ ಎಂಬುದು ಇಂದಿಗೂ ಕಾಣಸಿಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತಿಹಾಸದ ಪುಟಗಳನ್ನು ತರೆದು ನೋಡಿದಾಗ ಅವು ಕೇವಲ ಒಂದು ವರ್ಗ ಅಥವಾ ಪಕ್ಷಕ್ಕೆ ಸೀಮಿತವಾಗಿದ್ದವೆ ಹೊರತು ಶೋಷಿತ ಸಮುದಾಯಗಳ ಕುರಿತು ಎಂದಿಗೂ ತಿಳಿಸಿಕೊಡಲಿಲ್ಲ. ಶಿಕ್ಷಣ ಪಡೆದ ಶೋಷಿತ ಸಮುದಾಯದ ಜನ ಇಂದಿಗೂ ಸಹ ಕೃಷಿ ಕಾರ್ಮಿಕರಂತೆ ಬದುಕು ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ಇಂದು ವಿಕಸಿತ ಭಾರತ ಎಂಬ ಪರಿಭಾಷೆಗೆ ಬದಲುಗೊಂಡು ನಲುಗುತ್ತಿದೆ. ಈ ವ್ಯವಸ್ಥೆಗಳಿಂದ ಮುಕ್ತಿ ಸಿಗಬೇಕೆಂದರೆ ಪರ್ಯಾಯ ರಾಜಕೀಯ ನಾಯಕರನ್ನು ಸಾರ್ವಜನಿಕರು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಚಿತ್ರನಟ ಚೇತನ್ ಕುಮಾರ್ ಮಾತನಾಡಿ, ಶಿಕ್ಷಣ ಎಂಬ ಅಸ್ತದ ಮೂಲಕ ಪ್ರಬುದ್ಧ ಭಾರತ ನಿರ್ಮಾಣ ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಬಾಬಾ ಸಾಹೇಬರು ಯಾವ ಪಕ್ಷಕ್ಕೂ, ಯಾವ ಪಂಥಕ್ಕೂ ಮೀಸಲಾಗಿರದೆ ಸತ್ಯ ಪಂಥವನ್ನು ತಮ್ಮದಾಸಿಕೊಂಡು ಸಮ-ಸಮಾಜ ನಿರ್ಮಾಣದ ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಹೇಳಿದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಸಮಾನತೆಯ ಹರಿಕಾರರಾದ ಅಂಬೇಡ್ಕರ್ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಶಿಕ್ಷಣ ಪಡೆಯಲು ಎಲ್ಲರೂ ಅರ್ಹರು ಎಂದು ಜಗತ್ತಿಗೆ ತೋರಿಸಿಕೊಟ್ಟವರು ಎಂದು ನೆನೆದರು. ಸಮ್ಮೇಳನದಲ್ಲಿ ದೇಶದ ನಾನಾ ರಾಜ್ಯಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.