ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ ಫಲವತ್ತಾದ ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಪದಾಧಿಕಾರಿಗಳಾದ ಯಲ್ಲನಗೌಡ, ಲಕ್ಷ್ಮೀಕಾಂತ್‌ರೆಡ್ಡಿ, ವಿಜಯಕುಮಾರ್, ಪುಷ್ಪ, ಹೊನ್ನುರ ಸ್ವಾಮಿ, ಮೇಘರಾಜ್, ರಾಜ ಇತರರಿದ್ದರು.
ಬಳ್ಳಾರಿ : ಬಿಡದಿ ಮತ್ತು ಹಾರೋಹಳ್ಳಿ ಬಳಿಯ ಫಲವತ್ತಾದ ಕೃಷಿಭೂಮಿಯನ್ನು ಟೌನ್‌ಶಿಪ್ ಸಲುವಾಗಿ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಜೆಡಿಎಸ್ ಪಕ್ಷದಿಂದಪ್ರತಿಭಟನೆ ನಡೆಯಿತು.
ನಗರದ ಪಕ್ಷದ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಡಿಗಿ ಚನ್ನಪ್ಪ ವೃತ್ತದವರೆಗೆ ಸಾಗಿತು. ಬಳಿಕ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ಭೂಸ್ವಾಧೀನ ನೀತಿಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ತಾಯಣ್ಣ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಗಳ ವ್ಯಾಪ್ತಿಯಲ್ಲಿರುವ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆ ರೈತ ವಿರೋಧಿ ಹಾಗೂ ದಬ್ಬಾಳಿಕೆಯ ಕ್ರಮವಾಗಿದೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆಹುಳು ಸಾಕಾಣಿಕೆ ಹಾಗೂ ತೋಟಗಾರಿಕೆ ಪ್ರಮುಖ ಜೀವನೋಪಾಯವಾಗಿದ್ದು, ಭೂಸ್ವಾಧೀನದಿಂದ ಪ್ರತಿ ತಿಂಗಳು ಸುಮಾರು ಆರು ಲಕ್ಷ ಲೀ. ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀಳಲಿದೆ. ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಎಂದರು.
ಸರ್ಕಾರ ಸ್ಮಾರ್ಟ್‌ಸಿಟಿ ಹಾಗೂ ಇಂಟಿಗ್ರೇಟೆಡ್ ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಇದರಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಮಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಆರೋಪಿಸಿದರು. ಅಲ್ಲದೆ, ಸುಮಾರು 10 ಲಕ್ಷಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಮೂಲಕ ಪರಿಸರ ಹಾನಿಗೆ ಕಾರಣವಾಗುವ ಸಾಧ್ಯತೆಯಿದ್ದು, ಸಾಮಾಜಿಕ ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಅನುಸರಿಸಿಲ್ಲ ಎಂದು ದೂರಿದರು. ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ತಕ್ಷಣ ರದ್ದುಗೊಳಿಸಬೇಕು, 7,500ಕ್ಕೂ ಹೆಚ್ಚು ಎಕರೆ ಭೂಸ್ವಾಧೀನ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.