ತಂಗುದಾಣ, ಶೌಚಲಯ ಮರೀಚಿಕೆ

ಬಳ್ಳಾರಿಯ ಸಂಗಮ್ ವೃತ್ತದಲ್ಲಿ ಬಸ್ ಶೆಲ್ಟರ್‌ಯಿಲ್ಲದೆ ಪ್ರಯಾಣಿಕರು ರಸ್ತೆಯಲ್ಲಿ ನಿಂತಿರುವುದು.
ಬಳ್ಳಾರಿಯ ಸಂಗಮ್ ವೃತ್ತದಲ್ಲಿ ಬಸ್ ಶೆಲ್ಟರ್‌ಯಿಲ್ಲದೆ ಪ್ರಯಾಣಿಕರು ರಸ್ತೆಯಲ್ಲಿ ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಸ್ಥಿತಿ ಶೋಚನಿಯ
  • ಅಧಿಕಾರಿಗಳ ನಿರ್ಲಕ್ಷೃತನ

ಬಳ್ಳಾರಿ :

ಜಿಲ್ಲೆಯೂ ದಿನೇದಿನೆ ಬೆಳೆಯುತ್ತಿರುವುದು ಒಂದಡೆಯಾದರೆ ವಾಹನಗಳ ಸಂಚಾರ, ಜನಸಂಖ್ಯೆ ದಟ್ಟಣೆ ಹೆಚ್ಚುತ್ತಿದೆ. ಆದರೆ, ನಗರದಲ್ಲಿ ಪ್ರಯಾಣಿಕರಿಗೆ ತಂಗುದಾಣ ಹಾಗೂ ಸಾರ್ವಜನಿಕರ ಶೌಚಾಲಯಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದೆ, ವಿದ್ಯಾರ್ಥಿ ಸಾರ್ವಜನಿಕರು ಬಿಸಿಲು, ಮಳೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬೆಂಗಳೂರು ರಸ್ತೆ, ಗಡಗಿ ಚನ್ನಪ್ಪ ವೃತ್ತ, ದುರ್ಗಮ್ಮ ಗುಡಿ ವೃತ್ತ, ರೈಲ್ವೆ ನಿಲ್ದಾಣ ಮುಂಭಾಗ, ಸುಧಾ ಕ್ರಾಸ್, ಎಸ್ಪಿ ಸರ್ಕಲ್ ಸೇರಿ ಬಹುತೇಕ ಕಡೆಗಳಲ್ಲಿ ಬಸ್ ಶೆಲ್ಟರ್‌ನ ವ್ಯವಸ್ಥೆ ಮಾಡಿಲ್ಲ. ಎಲ್ಲೆಲ್ಲಿ ಬಸ್ ಶೆಲ್ಟರ್ ನಿರ್ಮಾಣದ ಅವಶ್ಯಕತೆಯಿದೆ ಎಂಬುದರ ಬಗ್ಗೆ ಕೆಎಸ್‌ಆರ್‌ಟಿಸಿ, ಮಹಾನಗರ ಪಾಲಿಕೆ ಹಾಗೂ ಬುಡಾ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿಲ್ಲ. ಇಲ್ಲಿನ ಸಂಗಮ್, ದುರ್ಗಮ್ಮ ದೇವಸ್ಥಾನ ವೃತ್ತದಲ್ಲಿ ಸದಾ ಜನರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಸುಡುವ ಬಿಸಲು ಲೆಕ್ಕಿಸದೆ ನಿಂತಿರುತ್ತಾರೆ. ಮಳೆ ಬಂದರೆ ಅಲ್ಲಿರುವ ಮರದ ಕೆಳಗಡೆ ಆಶ್ರಯ ಪಡೆಯುತ್ತಾರೆ.
ಒಂದು ಶೆಲ್ಟರ್ ನಿರ್ಮಿಸಿ, ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದರೆ ಜನರಿಗೆ ಉಪಯೋಗವಾಗುತ್ತದೆ. ಈ ಬಗ್ಗೆ ಹಲವು ದಿನಗಳಿಂದ ಬೇಡಿಕೆ ಕೇಳಿ ಬಂದಿದ್ದರೂ ಅಧಿಕಾರಿ ಕಿವಿ ಹಾಕಿಕೊಂಡಿಲ್ಲ. ಕೆಲ ವರ್ಷಗಳ ಹಿಂದಯೇ ಬುಡಾ ಹಾಗೂ ಮಹಾನಗರ ಪಾಲಿಕೆಯಿಂದ ಬೆರಣಿಕೆಯಷ್ಟು ಕಡೆ ಶೆಲ್ಟರ್ ಕಟ್ಟಿಸಲಾಗಿದೆ. ದಿನ ನಿತ್ಯ ಸಾವಿರಾರು ಜನರು ಸೇರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ನಗರದಲ್ಲಿ ಎರಡು ಕೇಂದ್ರ ಬಸ್ ನಿಲ್ದಾಣಗಳಿದ್ದು, ಅಧಿಕಾರಿಗಳ ಬೇಜವ್ದಾರಿಯಿಂದ ಸ್ವಚ್ಛತೆ ಮರೀಚಿಕೆಯಾಗಿದೆ.
ಶೌಚಾಲಯ ಶೋಚನೀಯ : ಜಿಲ್ಲಾ ಕೇಂದ್ರಕ್ಕೆ ನಿತ್ಯ ಐದು ತಾಲೂಕುಗಳಿಂದ ಸೇರಿ ವ್ಯಾಪಾರ ವಹಿವಾಟು, ಸರ್ಕಾರಿ ಕೆಲಸ ಸೇರಿದಂತೆ ನಾನಾ ಕಾರಣಗಳಿಂದ ಸಾವಿರಾರು ಜನರು ಭೇಟಿ ನೀಡುವುದು ಸಾಮಾನ್ಯವಾಗಿದೆ. ಆದರೆ, ನಗರಕ್ಕೆ ಭೇಟಿ ನೀಡುವ ಜನತೆ ಬಯಲನ್ನೇ ಅವಲಂಬಿಸುವಂತೆಯಾಗಿದೆ. ನಗರದಲ್ಲಿ ಖಾಲಿ ಸ್ಥಳ, ಹಳೆ ಕಟ್ಟಡಗಳು, ಗಿಡ, ಮರಗಳ ಬಳಿ ಶೌಚಕ್ಕೆ ತೆರಳುವುದು ಸಾಮಾನ್ಯವಾಗಿದೆ. ಇನ್ನೂ ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್‌ಗಳಲ್ಲಿ ಸೇರಿ ಒಟ್ಟು 87 ಶೌಚಾಲಯಗಳಿದ್ದು, ಈ ಪೈಕಿ ಒಂಬತ್ತು ಸಾರ್ವಜನಿಕ ಬಳಕೆಯಲ್ಲಿವೆ. ಅದರ ಹೊರತಾಗಿ 14 ಶೌಚಾಲಯ ಕಟ್ಟಡಗಳು ಸಂಪೂರ್ಣ ದುರಸ್ತಿಯಲ್ಲಿದ್ದು, ತೆರವಿಗೆ ನಿರ್ಧರಿಸಿದರೆ, ಇನ್ನೂ 22 ಶೌಚಾಲಯ ಕಟ್ಟಡಗಳು ನಿರ್ವಹಣೆ, ದುರಸ್ತಿಯಿಂದಾಗಿ ಸಾರ್ವಜನಿಕರ ಬಳಕೆಯಿಂದ ದೂರ ಉಳಿದಿವೆ. ಮತ್ತೋಂದೆಡೆ 42 ಸಾರ್ವಜನಿಕ ಶೌಚಾಲಯ ಕಟ್ಟಡಗಳಿದ್ದು, ಅದರಲ್ಲಿ 30 ಬಳಕೆಯಲ್ಲಿವೆ. ಇನ್ನೂ 12 ಶೌಚಾಲಯಗಳು ನಿರುಪಯುಕ್ತವಾಗಿವೆ.
ಒಂದು ತೆರವಿಗೆ ಸಿದ್ಧವಾಗಿದ್ದು, 11 ಶೌಚಾಲಯ ಕಟ್ಟಡಗಳು ನಿರ್ವಹಣೆ ಕೊರತೆ ಹಾಗೂ ದುರಸ್ತಿಯಿಂದ ಕೂಡಿವೆ. ಸಿಟಿ ಬಸ್ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಕೆಲವಡೆ ಇರುವ ಶೌಚಾಲಯಗಳಿಗೆ ತೆರಳಲು ಹಣ ನೀಡಬೇಕಿದೆ. ನಿರ್ವಹಣೆ ನೆಪದಲ್ಲಿ ವಸೂಲಿ ದಂಧೆ ನಡೆಯುತ್ತಿದೆ. ಇನ್ನೂ ಹಳೆಯ ಡಿಸಿ ಕಚೇರಿ ಆವರಣದಲ್ಲಿರುವ ಶೌಚಾಲಯ ಸ್ವಚ್ಛತೆ ಹೇಳ ತೀರದಾಗಿದೆ. ದಿನವೂ ಹೋರಾಟ, ಮನವಿ, ಧರಣಿ, ಸಭೆಯಂತೆ ನಿತ್ಯ ನೂರರು ಜನರು ಆವರಣದಲ್ಲಿ ಸೇರುತ್ತಾರೆ. ಶೌಚಾಲಯ ನಿರ್ವಹಣೆ ಕೊರತೆಯಿಂದ ಬಯಲಿನಲ್ಲೇ ಶೌಚ ಮಾಡುವುದು ಸಾಮಾನ್ಯವಾಗಿದೆ. ಜತೆಗೆ ಕೆಲವೊಂದು ಇಲಾಖೆಗಳಿಗೆ ಶೌಚಲಯಗಳಿಲ್ಲದೇ ಮತ್ತೊಂದು ಕಚೇರಿಗಳಿಗೆ ತೆರಳುತ್ತಿದ್ದಾರೆ. ಜಿಲ್ಲೆಗೆ ಡಿಎಂಎಫ್, ಕೆಕೆಆರ್‌ಡಿಬಿ, ಕೆಎಂಇಆರ್‌ಸಿ ಸೇರಿದಂತೆ ನಾನಾ ಅನುದಾನಗಳಿದ್ದರೂ ಅಭಿವೃದ್ಧಿ ಮಾತ್ರಯಾಗಿಲ್ಲ.
"

ಕೋಟ್... ನಗರದಲ್ಲಿನ ಶೌಚಗೃಹಗಳ ನಿರ್ವಹಣೆ ಹಾಗೂ ದುರಸ್ತಿಗೆ ಕ್ರಮವಹಿಸಲಾಗುವುದು. ಅಗತ್ಯ ಸ್ಥಳದಲ್ಲಿ ತಂಗುದಾಣ ನಿರ್ಮಿಸಲು ಸಿದ್ಧತೆ ನಡೆಸುವುದು.- ಪಿ.ಎಸ್.ಮಂಜುನಾಥ, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ.

.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net