ಇಲ್ಲಿನ ಹವಂಬಾವಿಯಲ್ಲಿನ ಬ್ಯಾನರ್ ಅಳವಡಿಕೆಯ ಗಲಾಟೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಮೇಲೆ ಬಂದೂಕಿನಿಂದ ನಡೆದಿರುವ ದಾಳಿಯಲ್ಲಿ 9 ಎಂಎಂ ಬುಲೆಟ್‌ನ ನಾಲ್ಕೈದು ಚೂರುಗಳು ಪತ್ತೆಯಾಗಿದ್ದು, ಎಫ್‌ಎಸ್‌ಎಲ್‌ಗೆ ಕಳುಹಿಸಲಾಯಿತು. ಹುಬ್ಬಳ್ಳಿಯಿಂದ ಆಗಮಿಸಿರುವ ಹತ್ತು ಅಧಿಕಾರಿಗಳ ತಂಡ ಜನಾರ್ದನರೆಡ್ಡಿ ನಿವಾಸದ ಮನೆ ಮುಂಭಾಗದ ರಸ್ತೆ, ಗ್ಲಾಸ್ ಹೌಸ್, ಆವರಣ ಸೇರಿದಂತೆ ಘರ್ಷಣೆ ನಡೆದ ಎಲ್ಲ ಸ್ಥಳದಲ್ಲಿ ಶೋಧ ನಡೆಸಿತು. ಶೋಧಕ್ಕೂ ಮುನ್ನ ಡಿಐಜಿ ವರ್ತಿಕಾ ಕಟಿಯಾರ್ ಅವರಿಂದ ಘಟನೆ ಕುರಿತು ಮಾಹಿತಿ ಪಡೆಯಿತು. ಬ್ಯಾನರ್ ಘರ್ಷಣೆ ನಡೆದು ನಾಲ್ಕು ದಿನಗಳ ಬಳಿಕ ತಂಡ ಆಗಮಿಸಿದೆ. ಶಾಸಕ ಜಿ.ಜನಾರ್ದನರೆಡ್ಡಿ ಮೇಲೆ ದಾಳಿ ಹಿನ್ನೆಲೆ ಕೇಂದ್ರ, ರಾಜ್ಯ ನಾಯಕರು ಹಾಗೂ ಸಾವಿರಾರು ಮುಖಂಡರು ಮನೆಗೆ ಭೇಟಿ ನೀಡಿರುವುದರಿಂದ ವಾಹನಗಳ ಸಂಚಾರದಿಂದ ಸಾಕ್ಷೃಗಳು ನಾಶವಾಗಿವೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.