ಸಿರಗುಪ್ಪ: ಆಧುನಿಕ ಯುಗದ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯದಿಂದ ಇರಬೇಕಾದರೆ ಯೋಗ ಮಾಡುವ ಅಭ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಹೇಳಿದರು.
ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗವನ್ನು ಒಂದು ದಿನ ಮಾಡಿ ಬಿಡುವುದಲ್ಲ. ದಿನಾಲೂ ಮನೆಯಲ್ಲಿರುವ ಎಲ್ಲರೂ ಮಾಡಬೇಕು. ಮುಂದಿನ ಪೀಳಿಗೆಗೆ ಯೋಗವನ್ನು ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಒತ್ತಡವಿದೆ. ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಮುಕ್ತರಾಗಲು ಪ್ರತಿಯೊಬ್ಬರೂ ಪ್ರತಿದಿನ ಯೋಗ ಮಾಡಬೇಕು. ಆಗ ಮಾತ್ರ ಆರೋಗ್ಯಕರ ಜೀವನ ನಡೆಸುವುದರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಸರ್ಕಾರಿ ಅಭಿಯೋಜಕ ಶಿವರಾಜ್ ಪಾಟೀಲ್ ಮಾತನಾಡಿ, ಯೋಗ ಭಾರತದ ಅಮೂಲ್ಯ ಪರಂಪರೆಯಾಗಿದೆ. ವಿಶ್ವದಾದ್ಯಂತ ಆರೋಗ್ಯ ರಕ್ಷಣೆಯ ಅಭ್ಯಾಸ ಕ್ರಮವಾಗಿ ಗುರುತಿಸಿಕೊಂಡಿದೆ. ಯೋಗಭ್ಯಾಸದಿಂದ ಜೀವನದಲ್ಲಿ ಶಿಸ್ತು, ಏಕಾಗ್ರತೆ ಬೆಳೆಸಿಕೊಳ್ಳಬಹುದು. ಯುವಜನರು ಯೋಗ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮಂಜುಳಾ, ಕಾರ್ಯದರ್ಶಿ ಶಿವಕುಮಾರಸ್ವಾಮಿ, ಆಯುರ್ವೇದ ವೈದ್ಯಾಧಿಕಾರಿ ಅಶೋಕ, ವಕೀಲರಾದ ಸಿದ್ದಲಿಂಗಯ್ಯ, ಶಿವರುದ್ರಗೌಡ, ಖಾದರ್ ಬಾಷಾ, ಜಿಲಾನ್, ನೆಲಗುಂಟಯ್ಯ, ರಾಘವೇಂದ್ರ ಇತರರಿದ್ದರು.