ಬಳ್ಳಾರಿಯ ಬಿಮ್ಸ್ ಮೈದಾನದ ಮುಂಭಾಗದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನದ ವಿಶೇಷ ಜಾಗೃತಿ ಜಾಥಾದಲ್ಲಿ ನ್ಯಾ.ರಾಜೇಶ್ ಎನ್.ಹೊಸಮನೆ, ಎಸ್ಪಿ ಸುಮನ್ ಡಿ.ಪನ್ನೇಕರ್, ಎಎಸ್ಪಿ ನವೀನ್ ಕುಮಾರ್, ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ, ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜು ಭಾಗವಹಿಸಿದರು.
ಬಳ್ಳಾರಿ : ಇಂದಿನ ದಿನಗಳಲ್ಲಿ ದೇಶದ ಯುವಶಕ್ತಿಯು ಮಾದಕ ವ್ಯಸನಗಳ ಜಾಲಕ್ಕೆ ಸಿಲುಕಿ ತತ್ತರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು. ನಗರದ ಬಿಮ್ಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್‌ಹಾಗೂ ಜಿಲ್ಲಾ ನರ್ಸಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನತೆಯನ್ನು ಈ ಮಾರಕ ಜಾಲದಿಂದ ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವಶಕ್ತಿ ದೇಶದ ಬೆನ್ನೆಲುಬು. ಅವರು ದಾರಿ ತಪ್ಪದಂತೆ ನೋಡುವುದು ಮತ್ತು ಮಾದಕ ದ್ರವ್ಯಗಳ ಮುಕ್ತ ಸಮಾಜವನ್ನು ನಿರ್ಮಿಸುವುದು ಕೇವಲ ಕಾನೂನು ಸಂಸ್ಥೆಗಳ ಕೆಲಸವಲ್ಲ, ಅದು ಇಡೀ ಸಮಾಜದ ಹೊಣೆಯಾಗಿದೆ. ಮಾದಕ ಮುಕ್ತ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.
ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಮಾತನಾಡಿ, ವ್ಯಸನ ಮುಕ್ತ ಭಾರತವನ್ನು ಕಟ್ಟಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು ಮತ್ತು ಯಾವುದೇ ರೀತಿಯ ಅಕ್ರಮ ಮಾದಕ ದ್ರವ್ಯಗಳ ಜಾಲ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು. ಮಾದಕ ದ್ರವ್ಯಗಳ ಹಾವಳಿ ಸಮಾಜವನ್ನು ಮತ್ತು ಯುವ ಪೀಳಿಗೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಈ ಪಿಡುಗನ್ನು ಬುಡಸಮೇತ ಕಿತ್ತೆಸೆಯಲು ಕೇವಲ ಪೊಲೀಸ್ ಇಲಾಖೆಯ ಶ್ರಮ ಮಾತ್ರ ಸಾಲದು, ಸಾರ್ವಜನಿಕರ ಸಹಭಾಗಿತ್ವವೂ ಅತ್ಯಂತ ಅಗತ್ಯವಾಗಿದೆ ಎಂದರು.
ಇದೇ ವೇಳೆ ಮಾದಕ ವಸ್ತುಗಳಿಂದ ದೂರವಿರುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಲಾಯಿತು. ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಜಾಥಾ ನಡೆಯಿತು.