ಬಳ್ಳಾರಿಯ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ನಡೆದ ಬಿಜೆಪಿಯ ಪ್ರತಿಭಟನಾ ಸಮಾವೇಶದಲ್ಲಿ ಕಂಡ ಚಿತ್ರಣ. ಎರಡೇ ವರ್ಷದಲ್ಲಿ ಚುನಾವಣೆಯಿದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುತ್ತಲೇ ಬಿಜೆಪಿಯ ಎಲ್ಲ ನಾಯಕರು ಪಕ್ಷ ಚುನಾವಣೆಗೆ ಸನ್ನದ್ಧ ಎಂಬ ಸಂದೇಶ ಬಳ್ಳಾರಿಯಿಂದಲೇ ಸಾರಿದ್ದು ನಿಚ್ಚಳವಾಗಿತ್ತು. ರಾಜ್ಯ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಯಿ, ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಬಿ.ಶ್ರೀರಾಮುಲು ಸೇರಿದಂತೆ ಹಲವು ರಾಜ್ಯ ನಾಯಕರು ಕಾಂಗ್ರೆಸ್ ಶಾಸಕ ಭರತ್‌ರೆಡ್ಡಿ ಹಾಗೂ ಅವರ ಬೆಂಬಲಿಗರ ನಡೆಸಿದ ಗೊಂಡಾಗಿರಿಯನ್ನು ಒಕ್ಕೂರಲಾಗಿ ಖಂಡಿಸಿದರು. ಸ್ವತಃ ಜನರಿಂದ ಆಯ್ಕೆಯಾದ ಶಾಸಕರೇ ಬಹಿರಂಗವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯದ ಗೃಹ ಸಚಿವರು ಅಸಮರ್ಥರಿದ್ದಾರೆ. ಸಿಎಂ, ಡಿಸಿಎಂ ಕುರ್ಚಿ ಕಾಳಗದಲ್ಲಿ ನಿರತರಾಗಿದ್ದಾರೆ. ರಾಜ್ಯದ ಜನರ ನೆಮ್ಮದಿಯನ್ನು ಸರ್ಕಾರ ಹಾಳು ಮಾಡಿದೆ ಎಂಬುದಾಗಿ ಬಿಜೆಪಿ ನಾಯಕರು ವಾಗ್ದಳಿ ನಡೆಸಿದರು. ಕುಸಿದ ಕಾನೂನು, ಕೊಲೆ ದರೋಡೆ, ಡ್ರಗ್ಸ್ ಮಾಫಿಯಾ, ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ, ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಭಾಷಣಯುದ್ದಕ್ಕೂ ಹರಿಹಾಯ್ದರು.